ಜನತೆಯ ಸಮಸ್ಯೆ ಆಲಿಸಿದ ಶಾಸಕ ಕಂದಕೂರ
ಗುರುಮಠಕಲ್: ಪಟ್ಟಣದ ಹೈದರಾಬಾದ್ ರಸ್ತೆಯಲ್ಲಿನ ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಮಂಗಳವಾರ ಕ್ಷೇತ್ರದ ಜನರ ಸಮಸ್ಯೆಗಳನ್ನು ಶಾಸಕ ಶರಣಗೌಡ ಕಂದಕೂರ ಆಲಿಸಿದರು.
ಗ್ರಾಮೀಣ ಭಾಗದ ಜನರು ಹೊತ್ತು ತಂದ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ಜನರ ಸಮಸ್ಯೆಗೆ ತಕ್ಷಣವೇ ಸ್ಪಂದನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸ್ಥಳೀಯ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ‘ಜನರಿಗೆ ಸಮಸ್ಯೆಯಾಗದಂತೆ ಶೀಘ್ರ ಕ್ರಮವಹಿಸಿ’ ಎಂದು ಸೂಚಿಸಿದರು.
ಸ್ಥಳೀಯ ಹಂತದಲ್ಲಿ ಪರಿಹಾರವಾಗುವ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಲಾಗುವುದು, ಸರ್ಕಾರದ ಮಟ್ಟದಲ್ಲಿನ ಸಮಸ್ಯೆಗಳನ್ನು ಗಮನಸೆಳಿದು ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಗುರುಮಠಕಲ್ ಕ್ಷೇತ್ರದ ಜನರು ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಈ ವೇಳೆ ಮಲ್ಲನಗೌಡ, ಶರಣು ಆವಂಟಿ, ಜಿ.ತಮ್ಮಣ್ಣ, ಪ್ರಕಾಶ್ ನೀರೆಟಿ, ಪುರಸಭೆ ಸದಸ್ಯ ನವಾಜರೆಡ್ಡಿ ಗವಿನಜೋಳ, ಬಾಲು ದಾಸರಿ, ಮಲ್ಲಿಕಾರ್ಜುನ ಹೋದಗಲ, ಕಾಶಪ್ಪ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.