ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟ
ಯಾದಗಿರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಘಟಕದ 2024-29 ಅವಧಿಯ ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಗೆ ಡಿಸೆಂಬರ್ 4 ರಂದು ಚುನಾವಣೆ ನಡೆಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಪಿ.ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 19 ರಿಂದ 27ರ ವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನವೆಂಬರ್ 28 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಸಿ ಅಂದೇ ಕ್ರಮಬದ್ಧ ಅರ್ಹ ಅಭ್ಯರ್ಥಿಗಳ ಪ್ರಕಟಣೆ ಹೊರಡಿಸಲಾಗುತ್ತದೆ. ಉಮೇದುವಾರಿಕೆ ಹಿಂಪಡೆಯಲು ನವೆಂಬರ್ 29ರ ಸಂಜೆ 4.30 ಗಂಟೆ ವರೆಗೆ ಅವಕಾಶವಿರುತ್ತದೆ. ಉಮೇದುವಾರಿಕೆ ವಾಪಸ್ಸು ಪಡೆದ ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರುಗಳನ್ನು ಅದೇ ದಿನ ಸಂಜೆ 5.30 ಗಂಟೆಯ ನಂತರ ಪ್ರಕಟಿಸಲಾಗುವುದು.
ಚುನಾವಣೆಯ ಮತದಾನವು ಡಿಸೆಂಬರ್ 4 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 4 ಗಂಟೆ ವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಭವನದಲ್ಲಿ ನಡೆಯಲಿದೆ. ಮತದಾನ ಮುಕ್ತಾಯದ ನಂತರ ಅಂದೇ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಘೋಷಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.