ಕಲಬುರಗಿ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ವಿಜಯಪುರ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸನ್ಮಾನಿಸಲಾಯಿತು.
ಡಾ.ಪಂ. ಪುಟ್ಟರಾಜ ಕವಿ ಗವಾಯಿ ಶ್ರೀಗಳ 14ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕಲಬುರ್ಗಿ ಹಿರಿಯ ನಾಟಕಕಾರ ಮಲಕೂಡ, ಶಂಕರಜಿ ಹೂವಿನ ಹಿಪ್ಪರಗಿ ಅವರಿಗೆ ಸನ್ಮಾನಿಸಲಾಯಿತು.
ಇಳಕಲ್ ಗುರು ಮಹಾಂತ ಸ್ವಾಮಿಗಳು, ಜ್ಞಾನ ಯೋಗ ಆಶ್ರಮದ ಶ್ರೀಗಳು, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ಟರ್, ಸದಸ್ಯೆ ಜ್ಯೋತಿ ಮಂಗಳೂರು, ಶ್ರೀಧರ್ ಹೆಗಡೆ, ನೀತಾ ವಿಜಯಪುರ, ಸಿದ್ದು ನಾಲತ್ತವಾಡ ಇತರರು ಇದ್ದರು.
ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯ ಕಿರೀಟ: ಕಳೆದ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ನಾಟಕ ಅಕಾಡೆಮಿಯ 2024 – 25 ನೇ ಸಾಲಿನ ಕೆ.ರಾಮಚಂದ್ರಯ್ಯ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮಲಕೂಡ ಗ್ರಾಮದ ಹಿರಿಯ ರಂಗಕರ್ಮಿ ಸಿದ್ಧಲಿಂಗಯ್ಯ ಸ್ವಾಮಿ ಅವರು, ಹೆಣ್ಣು ಆಟದ ಗೊಂಬೆಯಲ್ಲ, ಅಹಂಕಾರದ ಅಂತ್ಯ, ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ, ತ್ಯಾಗದ ತೊಟ್ಟಿಲು, ಗೆಲುವು ಸಾಧಿಸಿದ ಗರತಿ, ನೆಮ್ಮದಿಯ ನೆಲೆ, ಪುಣ್ಯದ ಹೆಣ್ಣು ಪಾಪದ ಕಣ್ಣು, ಯಾರದೋ ತಪ್ಪು ಯಾರಿಗೋ ಶಿಕ್ಷೆ ಸೇರಿ ಎಂಟು ನಾಟಕಗಳನ್ನು ರಚಿಸಿದ್ದಾರೆ.
ಅಲ್ಲದೇ ಕಲಿಯುಗದ ಕಲ್ಪವೃಕ್ಷ ಕೃತಿ ರಚಿಸಿದ್ದು, ಶ್ರೀ ವಿಶ್ವಗಂಗಾ, ಭೀಷ್ಮ ಬ್ರಹ್ಮಚಾರಿ, ನಾಗಾವಿ ಸಿರಿ ಇವರ ಸಂಪಾದಿತ ಕೃತಿಗಳು.
ಸತಿ ಸಂಸಾರದ ಜ್ಯೋತಿ, ಹುಚ್ಚಿ ಹಚ್ಚಿದ ದೀಪ, ಮೂರು ದಿನದ ಸಂತಿ, ಶ್ರೀ ವಿಶ್ವರಾಧ್ಯರ ಮಹಾತ್ಮೆ, ಶ್ರೀ ಗುರುನಂಜೇಶ್ವರ ಮಹಾತ್ಮೆ, ಶ್ರೀ ಸೋಮೇಶ್ವರ ಮಹಾತ್ಮೆ ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ, ನಾಟಕ ನಿರ್ದೇಶಿಸಿದ್ದಾರೆ.
ಕಳೆದ 35 ವರ್ಷಗಳಿಂದ ರಂಗಭೂಮಿಯ ಸೇವೆ ಮಾಡುತ್ತಿರುವ ಸ್ವಾಮಿ, ಕರುನಾಡ ಪದ್ಮಶ್ರೀ, ಶ್ರೀ ಚನ್ನರತ್ನ, ರಂಗ ದಿಗ್ಗಜ, ರಂಗ ಗಂಧರ್ವ, ರಂಗ ನೃಪತುಂಗ, ಬ್ರಹ್ಮಶ್ರೀ ನಾರಾಯಣಗುರು, ಕಳ್ಳಿಮಠದ ಕಲ್ಪವೃಕ್ಷ, ಲಲಿತ ಚೇತನ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಅಮರಸಿದ್ಧ, ಅತ್ಯುತ್ತಮ ಗ್ರಾಮೀಣ ವರದಿಗಾರ ಸೇರಿ ಹಲವಾರು ಪ್ರಶಸ್ತಿಗಳನ್ನು ತಮ್ಮ ದಾಗಿಸಿಕೊಂಡಿದ್ದಾರೆ. ಇವರ ರಂಗ ಸೇವೆಯನ್ನು ಗುರುತಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವೇ ಸರಿ.