ಸಿದ್ದಸಿರಿ ಇಥೆನಾಲ್ ಹಾಗೂ ಪವರ್ ಕಂಪನಿ ಪ್ರಾರಂಭಕ್ಕಾಗಿ ಹಾಗೂ ರೈತರ ಕಬ್ಬು ಖರೀದಿಗಾಗಿ ಒತ್ತಾಯಿಸಿ ಕಳೆದ 18 ದಿನಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ…
ಚಿಂಚೋಳಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅಖಿಲ ಭಾರತ ರೈತ ಹಿತರಕ್ಷಣಾ ಸಮಿತಿಯು ಸಿದ್ದಸಿರಿ ಇಥೆನಾಲ್ ಹಾಗೂ ಪವರ್ ಕಂಪನಿ ಪ್ರಾರಂಭಕ್ಕಾಗಿ ಹಾಗೂ ರೈತರ ಕಬ್ಬು ಖರೀದಿಗಾಗಿ ಒತ್ತಾಯಿಸಿ ಕಳೆದ 18 ದಿನಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕಾಳಗಿ ತಾಲೂಕಿನ ಬಿಜೆಪಿ ಹಿರಿಯ ಮುಖಂಡ ಮಲ್ಲಿನಾಥ ಕೊಲಕುಂದಿ ನೇತೃತ್ವದಲ್ಲಿ ನೂರಾರು ರೈತರು ಬೆಂಬಲ ಸೂಚಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಲ್ಲಿನಾಥ ಕೊಲಕುಂದಿ ಅವರು, ರಾಜ್ಯದಲ್ಲಿ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಈಗಾಗಲೇ ವಕ್ಫ್ ಮಂಡಳಿ ಹೆಸರಲ್ಲಿ ರೈತರ ಭೂಮಿಯನ್ನು ಕಬಳಿಸುವ ಹುನ್ನಾರ ನಡೆದಿದೆ. ಕ್ಷೇತ್ರದಲ್ಲಿ ಬಹುದಿನಗಳ ಕನಸು ನನಸಾಗುವ ಮುನ್ನವೇ ಕಾಂಗ್ರೆಸ್ ಪಕ್ಷ ಸಿದ್ದಸಿರಿ ಇಥೆನಾಲ್ ಹಾಗೂ ಪವರ್ ಕಂಪನಿ ಬಂದ್ ಮಾಡಿದೆ ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಶೀಘ್ರವೇ ಸರ್ಕಾರ ಸಿದ್ದಸಿರಿ ಕಂಪನಿ ಪ್ರಾರಂಭಕ್ಕಾಗಿ ಮುಂದಾಗಬೇಕು ಇಲ್ಲದಿದ್ದರೆ ರೈತ ಕ್ರಾಂತಿ ಪ್ರಾರಂಭವಾಗಲಿದೆ ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಂದಿಕುಮಾರ ಪಾಟೀಲ, ಆರ್.ಆರ್.ಪಾಟೀಲ, ವೀರಣ್ಣ ಗಂಗಣ್ಣಿ, ಶರಣಪ್ಪ ಪೆದ್ದಿ, ವಿಜಯಕುಮಾರ ತುಪ್ಪದ, ಜಗದೀಶ ಮಾಲಿಪಾಟೀಲ, ರಾಜು ಸೀಳಿನ, ಕಾಳು ಪಡಶೇಟ್ಟಿ, ಶರಣಮ್ಮ ಸಾಲಿಮಠ, ಸಂತೋಷ ಮಂಗಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.