ತ್ರೈಮಾಸಿಕ ಕೆಡಿಪಿ ಸಭೆ | ಜಿಲ್ಲೆಗೆ 10 ಕೋಟಿ ಮುಂಗಾರು ಬೆಳೆ ಪರಿಹಾರ ಬಿಡುಗಡೆ

ಸರ್ಕಾರಿ ಜಮೀನು ಕಬ್ಜಾ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ 

ಬೀದರ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಸಾಕಷ್ಟು ಬೆಳೆ ಹಾನಿಯಾಗಿದೆ. ಸರ್ಕಾರವು 10 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದು ಇನ್ನೂ 3.76 ಕೋಟಿ ರೂ. ಬರಲಿದೆ ಜಿಲ್ಲೆಯ 15 ಸಾವಿರ ರೈತರ ಖಾತೆಗಳಿಗೆ ಮುಂಗಾರು ಬೆಳೆ ಪರಿಹಾರ ನೇರವಾಗಿ ಜಮೆಯಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 17,460 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು‌.

ಮುಂಗಾರು ಬೆಳೆ ವಿಮೆ ಯೋಜನೆಯಡಿ 774 ಬೆಳೆ ಕಟಾವು ಪ್ರಯೋಗಗಳನ್ನು ಹಮ್ಮಿಕೊಳ್ಳಲಾಗಿದೆ. ಹಿಂಗಾರು ಹಂಗಾಮಿ ನಲ್ಲಿ ಕಡಲೆ, ಜೋಳ, ಕೂಸುಬಿ ಶೇ.87% ಬಿತ್ತನೆಯಾಗಿದ್ದು ಈ ವಾರದಲ್ಲಿ ಶೇ.100% ಬಿತ್ತನೆಯಾಗಲಿದೆ. ಸದ್ಯ ಜಿಲ್ಲೆಯಲ್ಲಿ ಬೀಜ, ಗೊಬ್ಬರಗಳ ಯಾವುದೇ ಸಮಸ್ಯೆ ಇಲ್ಲವೆಂದು ಅಧಿಕಾರಿ ಗಳು ಸಚಿವರ ಗಮನಕ್ಕೆ ತಂದರು.

ರೈತರಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಅವಧಿಯಲ್ಲಿ 7 ತಾಸು ವಿದ್ಯುತ್ ಸರಬರಾಜು ಮಾಡುವಂತೆ ಜೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ಸೂಚಿಸಿದರು. ರೈತರ ಆತ್ಮಹತ್ಯೆ ಪ್ರಕರಣಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಈಗಾಗಲೇ ಚೆಕ್ ವಿತರಿಸಿದ್ದು ಖಾತೆಗೆ ಹಣ ಜಮೆ ಆಗದೇ ಇರುವುದಕ್ಕೆ ಅಸಾಮಾಧಾನ ವ್ಯಕ್ತಪಡಿಸಿದ ಸಚಿವರು ಕಂದಾಯ ಹಾಗೂ ಕೃಷಿ ಅಧಿಕಾರಿಗಳು ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಕೆಡಿಪಿ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಸಮಗ್ರ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.

ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರಿಗೆ 2 ಸಾವಿರ ಮಾಸಿಕ ವೇತನ ಸರಿಯಾಗಿ ಜಮೆ ಆಗುತ್ತಿರುವ ಬಗ್ಗೆ ಕಂದಾಯ ಅಧಿಕಾರಿಗಳು ಸೂಕ್ತ ಗಮನ ಇಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕ ಫೀ ಇಲಾಖೆಯು ಕಟ್ಟಬೇಕು. ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಉಪ ವಿಭಾಗಾಧಿ ಕಾರಿಗಳು ಸೂಕ್ತ ವರದಿ ನೀಡುವಂತೆ ಸಚಿವರು ಸೂಚಿಸಿದರು.

ಯಾವುದೇ ರೈತರಿಗೆ ಸಾಲ ಮರು ಪಾವತಿಸುವಂತೆ ಬ್ಯಾಂಕಗಳು ಒತ್ತಡ ಹೇರಬಾರದು. ರೈತರಿಗೆ ತೊಂದರೆಯಾಗದಂತೆ ಸುತ್ತೋಲೆ ಹೊರಡಿಸಬೇಕು. ಕೃಷಿ ಇಲಾಖೆ ಹಾಗೂ ತೋಟಗಾ ರಿಕೆ ಇಲಾಖೆಯ ರೈತ ಅಭಿವೃದ್ಧಿ ಕಾರ್ಯಕ್ರಮಗಳು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕೆಂದರು.

ಸರ್ಕಾರಿ ಜಮೀನು ಕಬ್ಜಾ ಮಾಡಿದವರು ವಿರುದ್ಧ ಕ್ರಿಮಿನಲ್ ಮೊಕದ್ದಾದಮೆ : ಜಿಲ್ಲೆಯಲ್ಲಿ ಪುರಸಭೆ, ನಗರಸಭೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಸರಕಾರಿ ಜಮೀನು ಅತಿಕ್ರಮಣ ಆಗದಂತೆ ಭೂಮಾಫಿಯಾಗೆ ಬಲಿಯಾಗದಂತೆ ಅಧಿಕಾರಿಗಳು ಸೂಕ್ತ ನಿಗಾ ವಹಿಸತಕ್ಕದ್ದು. ಕಚೇರಿ ಕಟ್ಟಡಗಳು, ಕುಡಿಯುವ ನೀರಿನ ಘಟಕಗಳು, ಸಾರ್ವಜನಿಕ ಉಪಯೋಗಕ್ಕೆ ಇರುವಾಗ ಯಾರೇ ಕಬ್ಜಾ ಮಾಡಿದರೂ ಸೂಕ್ತ ಕ್ರಮಕೈಗೊಳ್ಳ ಬೇಕು. ಅಧಿಕಾರಿಗಳು ಅಂಥವರ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವರು ಸೂಚಿಸಿದರು.

ಕಬ್ಬು ದರ ನಿಗದಿ ಕುರಿತು ಸಭೆ: ಈ ತಿಂಗೊಳಗಾಗಿ ಕಬ್ಬು ದರ ನಿಗದಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಶಾಸಕರ ಹಾಗೂ ಕಾರ್ಖಾನೆ ಗಳ ಅಧಿಕಾರಿಗಳು ಸಭೆಯನ್ನು ಜರುಗಿಸಲು ಸೂಕ್ತ ಕ್ರಮಕೈಗೊ ಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಚಿವರು ತಿಳಿಸಿದರು.

ಬಿ.ಎಸ್.ಎಸ್.ಕೆ. ಪುನಶ್ಚೇತನಕ್ಕೆ ಅಗತ್ಯ ಕ್ರಮ: ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಶೀಘ್ರವೇ ಸಿ. ಎಂ. ಜೊತೆಗೆ ಚರ್ಚಿಸಲು ಜಿಲ್ಲೆಯ ಜನಪ್ರತಿ ನಿಧಿಗಳ ಪಕ್ಷಾತೀತವಾಗಿ ಸಭೆ ಯೊಂದನ್ನು ಜರುಗಿಸುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಬಿ.ಎಸ್.ಎಸ್.ಕೆ. ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವುದಾಗಿ ತಿಳಿಸಿದ ಅವರು ತಮ್ಮ ತಂದೆಯವರು ಶೇರು ಹಣ ಸಂಗ್ರಹಿಸಲು ಅಲೆದ ದಿನಗಳನ್ನು ನೆನಪಿಸಿಕೊಂಡರು. ಇಂಥ ಕಾರ್ಖಾನೆ ಮುಚ್ಚಿರುವುದು ದುರದೃಷ್ಠ. ಈಗ 300 ಕೋಟಿಗಳಷ್ಟು ಸಾಲ ಇದೆ. ಕಾರ್ಖಾನೆಯಲ್ಲಿ ಯಾವುದೇ ಸಹ ಉತ್ಪಾದನೆ ಇಲ್ಲ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತಿತವಾಗಿ ಈ ಕಾರ್ಖಾನೆ ಪುನರಾಂಭಿಸುದಕ್ಕೆ ಚರ್ಚಿಸುತ್ತಿರುವುದು ಉತ್ತಮ ಬೆಳೆವಣಿಗೆ. ಈಗಾಗಲೇ ಈ ಕುರಿತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಜೊತೆ ಚರ್ಚಿಸಲಾಗಿದೆ.

ಖಾಸಗಿಯವರಿಗೆ ಲೀಸ್ ಔಟ್ ಕೊಡುವುದೇ ಒಂದೇ ಪರಿಹಾರ. ಈ ನಿಟ್ಟಿನಲ್ಲಿ ಪ್ರಸ್ತಾವನೆವೊಂದನ್ನು ಸಿದ್ಧಗೊಳಿ ಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ತಿಳಿಸಿದರು. ಕಾರ್ಖಾನೆ ಸಾಲದ ಅಕ್ರಮ ಹಾಗೂ ಸೋರಿಕೆಗೆ ಅಗತ್ಯ ತನಿಖೆಯನ್ನು ಕೈಗೊಳ್ಳಲಾಗುವುದೆಂದರು.

ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್ ಅವರು ಮಾತನಾಡಿ, ಈಗಾಗಲೇ ಕಾರ್ಖಾನೆಗೆ ಸಾಕಷ್ಟು ಆರ್ಥಿಕ ಹಾನಿಯಾಗಿದೆ. ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವಲ್ಲಿ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದರು.

ತೋಟಗಾರಿಕೆ ಬೆಳೆ ಆಧಾರಿತ ಹಣ್ಣುಗಳ ಶೀತಲ ಘಟಕ ನಿರ್ಮಾನಕ್ಕೆ ಖಾಸಗಿ ಕಂಪನಿಗಳು ಸಿದ್ಧರಿದ್ದು 4 ಎಕರೆ ಭೂಮಿ ಗುರುತಿಸಲು ಹಾಗೂ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಿಚವರಾದ ಈಶ್ವರ ಖಂಡ್ರೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ದಾಳಿಂಬೆ ಹಾಗೂ ಮಾವು ಹಣ್ಣುಗಳ ರಪ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಆಹಾರ, ಹಣ್ಣುಗಳಲ್ಲಿ ವಿಷಕಾರಿ ರಸಾಯನ ಬಳಕೆ ದಾಳಿ ನಡೆಸಿ: ಪಾನಿಪುರಿ, ಗೋಬಿ ಮಂಚೂರಿಗಳಲ್ಲಿ ಕ್ಯಾನ್ಸರಗೆ ಕಾಣವಾಗುವ ರಸಾಯನಗಳನ್ನು ಬಳಸದಂತೆ ಸರಕಾರ ಈಗಾಗಲೇ ನಿಷೇಧ ಹೇರಿದ್ದರೂ ಅನೇಕ ಕಡೆ ಕೃತಕ ಬಣ್ಣ ಗಳನ್ನು ಬಳಸಲಾಗುತ್ತಿದೆಯೆಂದು ಶಾಸಕರು ಸಚಿವರ ಗಮನಕ್ಕೆ ತಂದರು. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜೊತೆ ಆಹಾರ ಸುರಕ್ಷತೆ ಅಧಿಕಾರಿಗಳು ತಕ್ಷಣವೇ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿ ದರು. ಜಿಲೇಬಿಗಳನ್ನು ಗ್ಲಾಸ್ ಕವರನಲ್ಲಿಡುವಂತೆ ಹಾಗೂ ಹಣ್ಣುಗಳಿಗೆ ಕೃತಕ ರಸಾಯನ ಬಳಸದಂತೆ ಜಾಗೃತಿ ಅರಿವು ಮೂಡಿಸುವಂತೆ ತಿಳಿಸಲಾಯಿತು.

ಬಿಡಾಡಿ ಧನಗಳನ್ನು ಗೋಶಾಲೆಗೆ ಸೇರಿಸಿ: ನಗರ ಪ್ರದೇಶ ಗಳಲ್ಲಿ ಬಿಡಾಡಿ ಧನಗಳನ್ನು ಗೋಶಾಕೆಗೆ ಸೇರಿಸುವಂತೆ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಸಂಸ್ಥೆ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಪಶು ಸಂಗೋಪನಾ ಅಧಿಕಾರಿಗಳು ಜಂಟಿಯಾಗಿ ಒಂದು ವಾರ ದೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದರು.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹಾಗೂ ಫಲಿತಾಂಶ ಮಟ್ಟ ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ಡಿಡಿಪಿಐಗೆ ತಿಳಿಸಿದರು. 20 ಅಂಶಗಳ ಕಾರ್ಯಕ್ರಮಗಳನ್ನು ಎಲ್ಲ ಶಾಲೆಗಳಲ್ಲಿ ಅನುಪಾಲನೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 25,460 ಮ್ಯಾಟ್ರಿಕ್ ವಿದ್ಯಾರ್ಥಿಗಳಿದ್ದು ಕಡಿಮೆ ಕಲಿಕಾ ಸಾರ್ಮಥ್ಯವಿರುವ ವಿದ್ಯಾರ್ಥಿಗಳಿಗೆ ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.

ಪ್ರಾಥಮಿಕ ಶಾಲೆಗಳಲ್ಲಿ 666 ಹಾಗೂ ಪ್ರೌಢ ಶಾಲೆಗಳಲ್ಲಿ 319 ಅತಿಥಿ ಶಿಕ್ಷಕರನ್ನು ಭರ್ತಿ ಮಾಡಲಾಗಿದ್ದು, ಶಿಕ್ಷಕರ ಕೊರತೆ ಇಲ್ಲವೆಂದು ಸಭೆಯ ಗಮನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಸಚಿವರು ವಿಶೇಷಚೇತನರಿಗೆ ತ್ರಿಚಕ್ರ ವಾಹನ, ಅಂಧ ಮಕ್ಕಳಿಗೆ ಬ್ರೈಲ್ ಲಿಪಿಯ ಲ್ಯಾಪ್‌ಟ್ಯಾಪ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಪುಸ್ತಕಗಳನ್ನು ವಿತರಿಸಿದರು.

ಈ ಸಭೆಯಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಂದೀಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹೆರೋಜ್ ಖಾನ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೂಡ, ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣ ಶಾಸಕರಾದ ಶರಣು ಸಲಗರ, ವಿಧಾನ ಪರಿಷತ್ತಿನ ಸದಸ್ಯರಾದ ಭೀಮರಾವ ಪಾಟೀಲ, ಡಾ.ಚಂದ್ರಶೇಖರ ಪಾಟೀಲ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಬೀದರ, ಬಸವಕಲ್ಯಾಣ ಸಹಾಯಕ ಆಯುಕ್ತರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!