24 ರಂದು ಪರೀಕ್ಷೆ | 8 ಪರೀಕ್ಷಾ ಕೇಂದ್ರ | 2589 ಅಭ್ಯರ್ಥಿ ನೋಂದಣಿ

ಬೀದರ : ನವೆಂಬರ್.24 ರಂದು ನಡೆಯಲಿರುವ ಕೆಸೆಟ್-2024 ಪ್ರವೇಶ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಯಾವುದೇ ಅಹಿತಕರ ಘಟನೆ ಹಾಗೂ ಲೋಪವಾಗದಂತೆ ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೆಸೆಟ್ ಪ್ರವೇಶ ಪರೀಕ್ಷೆಗಳ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೀದರ ಜಿಲ್ಲಾ ಕೇಂದ್ರದ 3 ರೂಟಗಳಲ್ಲಿ 8 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2589 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 64 ಅಂಗವಿಕಲ ಅಭ್ಯರ್ಥಿಗಳು ಇದ್ದಾರೆ. ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದ್ದು, 2 ಪ್ರಶ್ನೆ ಪತ್ರಿಕೆಗಳಿದ್ದು, ಒಟ್ಟು 300 ಅಂಕಗಳು ಇರಲಿವೆ. ಜನರಲ್ ನಾಲೇಜ್‌ಗೆ 100 ಅಂಕ, ವಿಷಯ ಆಧಾರಿತ 200 ಅಂಕ ಇರುತ್ತವೆ.

ಪರೀಕ್ಷೆ ಬರೆಯುವ ಎಲ್ಲಾ ಆಭ್ಯರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ ಇರಬೇಕು. ನಿಗದಿಪಡಿಸಿದ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಸಿಸಿ ಟಿವಿ ಕ್ಯಾಮರಾ ಅಳವಡಿಸಿದ ಬಗ್ಗೆ ಮಾಹಿತಿ ಪಡೆಯಬೇಕು. ರೂಟ್ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ನಿಗದಿಪಡಿಸಿದ ಸಮಯದೊಳಗಾಗಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಲ್ಲಿಸಬೇಕು.

ವಿದ್ಯಾರ್ಥಿಗಳಿಗೆ ಪರೀಕ್ಷಾ ನಿಯಮಾವಳಿಯಂತೆ ಬಟ್ಟೆ ಧರಿಸಿದ್ದಾರೆಯೇ ಹಾಗೂ ಪ್ರವೇಶ ಪತ್ರಗಳನ್ನು ಪರಿಶೀಲಿಸಬೇಕು. ಅಂದು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ ವ್ಯಾಪ್ತಿಯ ಝಿರಾಕ್ಸ್ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಸೆಕ್ಷನ್ 144 ಜಾರಿ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಡಿವೈಎಸ್ಪಿ ಶಿವನಗೌಡ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಕಾಂತ ಗಂಗಶೆಟ್ಟಿ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಕಸ್ಟೋಡಿಯನ್ ಮಾರ್ಗ ವೀಕ್ಷಕರ ಮಾರ್ಗಾಧಿಕಾರಿಗಳು ಸೇರಿದಂತೆ ಡಿಡಿಪಿಯು ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!