ಅಖಿಲ ಭಾರತ ರೈತ ಹಿತರಕ್ಷಣಾ ಸಮಿತಿಯಿಂದ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಿ ರೈತರ ಕಬ್ಬು ಖರೀದಿಗಾಗಿ ಒತ್ತಾಯ | ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ
ಕಲಬುರಗಿ: ಚಿಂಚೋಳಿ, ಚಿತ್ತಾಪೂರ, ಸೇಡಂ, ಕಮಲಾಪೂರ ಭಾಗದ 370 ಹಳ್ಳಿಯ ರೈತರು 20 ಲಕ್ಷ ಟನ್ ಕಬ್ಬು ಬೆಳೆದಿದ್ದಾರೆ. ಜಿಲ್ಲಾಡಳಿತ ಹತ್ತಿರ ನಿಖರ ವರದಿ ಇಲ್ಲಾ, ಜಿಲ್ಲಾಡಳಿತ FRP ಪ್ರಕಾರ ಇನ್ನು ದರ ನಿಗದಿ ಮಾಡಿಲ್ಲಾ, ಅವೈಜ್ಞಾನಿಕವಾದ ವರದಿ ಮೂಲಕ ಕಬ್ಬು ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದ್ದಾರೆ.
ಚಿಂಚೋಳಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅಖಿಲ ಭಾರತ ರೈತ ಹಿತರಕ್ಷಣಾ ಸಮಿತಿ ಕಳೆದ ಒಂದು ತಿಂಗಳಿನಿಂದ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಿ ರೈತರ ಕಬ್ಬು ಖರೀದಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೆಂಬಲ ಸೂಚಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ಭಾಗದ ರೈತರು ಸಿದ್ದಸಿರಿ ಕಂಪನಿಯನ್ನು ನಂಬಿ ರೈತರು ಕಬ್ಬು ಬೆಳೆದಿದ್ದಾರೆ. ರೈತ ವಿರೋಧಿ ಧೋರಣೆ ಸರಿಯಲ್ಲ. ರೈತರ ಹೋರಾಟ ನಿಲ್ಲುವ ಪ್ರಶ್ನೆಯೇ ಇಲ್ಲ. ಇದು ಪಕ್ಷಾತೀತ ಪ್ರತಿಭಟನೆಯಾಗಿದೆ ಎಂದರು.
ಈ ಭಾಗದ ರೈತರ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗದೇ, ಅಭಿವೃದ್ಧಿ ಚಿಂತನೆ ಮಾಡದೆ ಕೇವಲ ಯಾರನ್ನೊ ತೃಪ್ತಿ ಪಡಿಸಲು ರೈತರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಆನೆಗೆ ಅರೆಕಾಸಿನ ಮಜ್ಜಿಗೆ ಕುಡಿಸಿದಂತೆ ವರ್ತಿಸುತ್ತಿರುವುದು ಖಂಡನಿಯ, ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರು, ತಮಗೆ ಸಂಬಂಧವಿಲ್ಲದಂತೆ ಸಚಿವರುಗಳು ವರ್ತಿಸುತ್ತಿರುವುದು ಖಂಡನಿಯ ಎಂದರು.
ನ. 27 ರಂದು ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಜಿಲ್ಲಾದ್ಯಂತ ಇರುವ ಮಠಾಧೀಶರುಗಳು, ರೈತ ಮುಖಂಡರು, ಕಬ್ಬು ಬೆಳೆಗಾರರು, ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಬೃಹತ್ ಸಭೆ ಆಯೋಜಿಸುವ ಮೂಲಕ ಸರ್ವರ ಸಲಹೆ ಸೂಚನೆ ಮೆರೆಗೆ ಮುಂದಿನ ಉಗ್ರ ಹೋರಾಟಕ್ಕೆ ರೂಪುರೇಷೆ ತಯಾರಿಸಲಾಗುವುದು ಎಲ್ಲರೂ ಸಂಪೂರ್ಣ ಬೆಂಬಲ ನೀಡಲು ಮನವಿ ಮಾಡಿದರು.
ಕಲಬುರಗಿಯ ಸಚಿವರು, ಸಂಸದರು ಕಬ್ಬು ಬೆಳೆಗಾರರ ಮನವಿ ಸ್ಪಂದಿಸಿ ನ್ಯಾಯ ಒದಗಿಸುತ್ತೆವೆ ಅಂತಾ ಹಿಂಬರಹ ಕೊಟ್ಟಿದ್ದಾರೆ. ಆದರೆ, ಬೀದರ ಸಂಸದರು ಸಚಿವರು ಯಾವುದೇ ಸ್ಪಂದನೆ ನೀಡದಿರುವುದು ರೈತ ವಿರೋಧಿ ಧೋರಣೆ ಅಲ್ಲದೇ ಮತ್ತೇನು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ನಂದಿಕುಮಾರ ಪಾಟೀಲ, ಶಿವಶರಣ ನಿಡಗುಂದಾ, ಶಿವಶರಣಪ್ಪ ಜಾಪಟ್ಟಿ, ಬಸವರಾಜ ಹೆಂಡಿ ಇತರರು ಇದ್ದರು.