ತೊಗರಿ ಫಸಲು ಬಾರದೇ ಬೂದುರು ರೈತರು ಕಂಗಾಲು…!
ಗುರುಮಠಕಲ್ : ತೊಗರಿ ಬೆಳೆದು ಫಸಲು ಬಾರದೇ ಗುರುಮಠಕಲ್ ತಾಲೂಕಿನ ಬೂದುರು ರೈತರು ದಾರಿ ತೋಚದೆ ಕಂಗಾಲಾಗಿದ್ದಾರೆ.
150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಿಗುರೊಡೆದಿಲ್ಲ, ಕಾಯಿ ಕಟ್ಟದಿರುವುದು ರೈತರನ್ನು ಆತಂಕಕ್ಕೆ ದೂಡಿದೆ.
ಸಕಾಲಕ್ಕೆ ಬೀಜ ಬಿತ್ತನೆ ಮಾಡಲಾಗಿದೆ. ಈ ವೇಳೆಗೆ ಹೂ ಚಿಗುರಿ ಕಾಯಿ ಕಟ್ಟುವ ಸಮಯ, ತೊಗರಿ ಗಿಡಗಳೇನೊ ಬೆಳೆದು ನಿಂತಿವೆ ಈವರೆಗೂ ಗಿಡ ಚಿಗುರು ಬಿಟ್ಟಿಲ್ಲ.
ಬಿತ್ತನೆಗೆ ಸಾಲ ಸೂಲ ಮಾಡಿದ್ದ ರೈತರು: ತೊಗರಿ ಬೆಳೆ ಬೆಳಿದು ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದರೂ ಈಗ ಏಕಾಏಕಿ ಹವಾಮಾನ ವೈಪರೀತ್ಯವೋ ಇಲ್ಲ, ಬೀಜ ಗುಣಮಟ್ಟ ಕೊರತೆಯೋ ಫಸಲು ಕೈಕೊಟ್ಟಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಬೆಳೆ ವಿಮೆ ಮಾಡಿಸದೇ ಸಂಕಷ್ಟ: ಸಾಮಾನ್ಯವಾಗಿ ಗಡಿ ಭಾಗದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ. ಪ್ರತಿ ಬಾರಿಯಂತೆ ಬೆಳೆ ತೆಗೆಯಬಹುದು ಎಂದುಕೊಂಡಿದ್ದ ರೈತರು ವಿಮೆ ಮಾಡಿಸದೇ ಮತ್ತಷ್ಟು ಸಂಕಷ್ಟಕ್ಕೀಡಾಗುವಂತೆ ಮಾಡಿದೆ.
ಬೆಳೆ ವಿಮೆ ಜಾಗೃತಿ ಹೆಚ್ಚಲಿ: ಗಡಿ ಭಾಗದಲ್ಲಿ ಹೆಚ್ಚಾಗಿ ಸಣ್ಣ ರೈತರು ಅನಕ್ಷರಸ್ಥರೇ ಆಗಿರುವುದರಿಂದ ಅವರಿಗೆ ಬೆಳೆ ವಿಮೆಯ ಲಾಭದ ಬಗ್ಗೆ ವಿವರಿಸಿ ಹೆಚ್ಚಿನ ರೈತರು ವಿಮೆ ಮಾಡಿಸುವ ಕುರಿತು ಕೃಷಿ ಇಲಾಖೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ.
ಸರ್ಕಾರ ರೈತರಿಗೆ ಪರಿಹಾರ ಒದಗಿಸಬೇಕು ಎನ್ನುವ ಒತ್ತಾಯ ರೈತರಿಂದ ಕೇಳಿ ಬಂದಿದೆ. ಕೃಷಿ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ರೈತ ಭೀಮಶಪ್ಪ, ಯಾಮಾರೆಡ್ಡಿ, ವೆಂಕಟಪ್ಪ, ಕಾಶಪ್ಪ, ಮಲ್ಲಪ್ಪ ಕುರುಬ, ಸಾಬಣ್ಣ, ಆಶಪ್ಪ ಹಣಮಂತು ಇತರರು ಒತ್ತಾಯಿಸಿದ್ದಾರೆ.