ಯಾದಗಿರಿ ಜಿಲ್ಲಾ ಪಂಚಾಯತಿಯಲ್ಲಿ ದಿಶಾ ಸಭೆ | ರಿಂಗ್ ರೋಡ್ ಜಮೀನು ಸ್ವಾಧೀನ ಸರ್ವೆ ಕಾರ್ಯ ಚುರುಕುಗೊಳಿಸಿ | ರಾಯಚೂರು ಸಂಸದ ಜಿ.ಕುಮಾರ್ ನಾಯಕ ಸೂಚನೆ
ಯಾದಗಿರಿ: ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿಶೇಷ ಗಮನ ನೀಡುವಂತೆ ರಾಯಚೂರ ಸಂಸದ ಶ್ರೀ ಜಿ.ಕುಮಾರ್ ನಾಯಕ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು’ಕಳೆದ 2024 ರ ಏಪ್ರಿಲ್ ರಿಂದ ಅಕ್ಟೋಬರ್ ಅಂತ್ಯದವರೆಗೆ ಸುಮಾರು 14000 ಹೆರಿಗೆ ಗಳಲ್ಲಿ 8 ತಾಯಿಮರಣ ಹಾಗೂ 127 ಶಿಶುಮರಣ ಆಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈ ರೀತಿಯ ಘಟನೆ ಗಂಭೀರ. ಮುಂದಿನ ದಿನಗಳಲ್ಲಿ ಗರ್ಭಿಣಿ ತಾಯಿ-ಶಿಶುಮರಣ ಪ್ರಮಾಣ ತಗ್ಗಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಬಾಲ್ಯ ವಿವಾಹ ತಡೆಯಬೇಕು.ಸಾಂಸ್ಥಿಕ ಹೆರಿಗೆ ಬಗ್ಗೆ ಪ್ರೋತ್ಸಾಹಿಸಬೇಕು.ಬಾಲ್ಯ ವಿವಾಹ ಬಗ್ಗೆ ದೂರು ನೀಡುವವರಿಗೆ ರಿವಾರ್ಡ ನೀಡಬೇಕು.
ಬೇಟಿ ಬಚಾವೋ ,ಭೇಟಿ ಪಡಾವೋ,ಭಾಗ್ಯಲಕ್ಷ್ಮಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು.ತಾಂಡಾ,ಹಟ್ಟಿ, ಹಿಂದುಳಿದ ಪ್ರದೇಶ, ಜಾಗೃತಿ ಇಲ್ಲದ ಸಮುದಾಯದಲ್ಲಿ ಅರಿವು ಮೂಡಿಸು ವಂತೆ ಸಲಹೆ ನೀಡಿ ಪಾಲಕರೂ ಕೂಡ ಜವಾಬ್ದಾರಿಯುತವಾ ಗಿರುವಂತೆ ತಿಳಿಸಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಯೋಜನೆಗಳಡಿ ಜಲಾನಯನ ಅಭಿವೃದ್ಧಿ,ಸ್ವಸಹಾಯ ಗುಂಪುಗಳಿಗೆ ಆವರ್ತನಿಧಿ ಸಮರ್ಪಕ ವಿತರಣೆ,ಬಂಡಿಂಗ್, ಸುಸ್ಥಿತಿಗಳ ಬಗ್ಗೆ ಡಿಸಿ,ಸಿಇಓ ಅವರು ಕಾಲ ಕಾಲಕ್ಕೆ ಪರಿಶೀಲಿಸುವಂತೆ ಸೂಚಿಸಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಹಾಗೂ ಮುಖ್ಯ ಮಂತ್ರಿಗಳ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಜಿಲ್ಲೆಯ ಸುಮಾರು 6 ಸಾವಿರ ಪರಿಶಿಷ್ಟ ಜಾತಿ ರೈತರಿಗೆ ಡ್ರಿಪ್- ಸ್ಪ್ರೀಂಕ್ಲರ್ ಸಲಕರಣೆ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಬೇಕು.ರಾಷ್ಟ್ರೀಯ ವಿಕಾಸ, ಮಣ್ಣು ಆರೋಗ್ಯ ಮತ್ತು ಫಲವತ್ತತೆ ಯೋಜನೆಯಡಿ ಎಷ್ಟು ರೈತರಿಗೆ ಲಾಭವಾಗಿದೆ ಎಂಬುದರ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು.ರೈತರಲ್ಲಿ ಹೆಚ್ಚಿನ ಇಳುವರಿ ಬೆಳೆಗಳು, ಮಣ್ಣು ಗುಣಮಟ್ಟದ ಬಗ್ಗೆ ಅರಿವು ಮೂಡಿಸಬೇಕು.
ಯಾದಗಿರಿ ರಿಂಗ್ ರೋಡ್ ಜಮೀನು ಸ್ವಾಧೀನ ಸರ್ವೆ ಕಾರ್ಯ ಚುರುಕುಗೊಳಿಸಬೇಕ ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಸಿಂದಗಿ -ಕೊಡಂಗಲ್-ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ದಿಪಡಿಸುವ ಹಾಗೂ ಶಹಾಪುರ ಬೈಪಾಸ್ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ವರದಿ ಸಲ್ಲಿಸಬೇಕು.ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆ,ಬಗ್ಗೆ ಅರಿವು ಮೂಡಿಸಬೇಕು.
ಜಲಧಾರೆ ಯೋಜನೆಯಡಿ ಹೆಚ್ಚುವರಿ ಓವರ್ ಹೆಡ್ ಟ್ಯಾಂಕಗಳ ಬೇಡಿಕೆ ವರದಿ ಮೂಲ ಯೋಜನೆಯಲ್ಲಿ ಸೇರಿಸಬೇಕು.ಈ ಕುರಿತು ಹತ್ತು ದಿನದಲ್ಲಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಎಲ್ಲ ಶಾಲೆಗಳಿಗೆ ಕಂಪೌಂಡ್, ಸೌಲಭ್ಯ, ಯಾದಗಿರಿ ರಿಂಗ್ ರಸ್ತೆಗೆ ಸಂಬಂಧಿಸಿದ ಭೂಸ್ವಾಧೀನ ತಕ್ಷಣ ಆಗಬೇಕು. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರು ರೈತರಿಗೆ ಇರುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿ,ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಲವೀಶ ಒರಡಿಯಾ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಗರ್ಭಿಣಿ ತಾಯಿಂದಿರ, ಶಿಶು ಮರಣ ಗಂಭೀರ ವಿಷಯವಾಗಿದ್ದು, ಈ ಕುರಿತು ಪರಿಣಾಮಕಾರಿ ಕ್ರಮ ಆಗಬೇಕು. ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರಿಗೆ ಸೌಲಭ್ಯ ಕಲ್ಪಿಸಿ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಸಿಂದಗಿ ಕೊಡಂಗಲ್ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣಗೊಳಿಸುವ, ನೂರು ಕೋ.ರೂಗಳ ಕೆರೆ ಅಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ ಜಾರಿಗೆ ಕೇಂದ್ರ ಮಟ್ಟದಲ್ಲಿ ಪ್ರಯತ್ನಿಸಬೇಕು – ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್