ಜ್ಞಾನ ವೃಕ್ಷ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ದಶಮಾನೋತ್ಸವ..
ಗುರುಮಠಕಲ್: ನಮ್ಮ ಭಾಗದಲ್ಲಿ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿಸುವ ಛಲದಿಂದ ಸ್ಥಾಪಿನೆಯಾದ ಸಂಸ್ಥೆಗೆ ಸದಾ ಸಹಕಾರ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು.
ಪಟ್ಟಣದ ಹೊರವಲಯದ ನಳಂದ ಸ್ಟಡಿ ಕ್ಯಾಂಪಸ್ ನಲ್ಲಿ ಶ್ರೀ ರಾಮ್ ಎಜ್ಯುಕೇಶನ್ ಡೆವೆಲಪ್ ಮೆಂಟ್ ಟ್ರಸ್ಟ್ ನ ಜ್ಞಾನ ವೃಕ್ಷ, ನವೋದಯದ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ದಶಮಾನೋತ್ಸವ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗಡಿಯಲ್ಲಿ ಸುಮಾರು ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ, ಸಂಸ್ಥೆಯ ವ್ಯವಸ್ಥಾಪಕರೂ ಸಹ ಗ್ರಾಮೀಣ ಭಾಗದ ಬಡ ಕುಟುಂಬದಿಂದಲೇ ಬಂದವರಾಗಿದ್ದು, ಮಕ್ಕಳು ನವೋದಯ, ಸೈನಿಕ ಶಾಲೆಗೆ ಆಯ್ಕೆಯಾಗಲು ಸಹಕಾರಿಯಾಗಿದೆ ಎಂದರು.
ಸರ್ಕಾರದಿಂದ ಸೌಕರ್ಯ ಪಡೆಯಲು ಸಹಕಾರ ನೀಡುವುದಾಗಿ ಹೇಳಿದರು. ಇದೇ ವೇಳೆ 50 ಬೇಂಚ್ ನೀಡುವುದಾಗಿ ಘೋಷಿಸಿದರು.
ವಿಶೇಷ ಆಹ್ವಾನಿತರಾಗಿ ತೆಲಂಗಾಣದ ನಿ.ಎಡಿಜಿಪಿ ಆರ್.ಎಸ್.ಪ್ರವೀಣ ಕುಮಾರ ಮಾತನಾಡಿ, ಗಡಿ ಭಾಗದಲ್ಲಿ ಇಂತಹ ಸಂಸ್ಥೆ ಕಟ್ಟಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಣ ವ್ಯಾಪಾರವಾಗಬಾರದು, ಜೀವನದಲ್ಲಿ ಮುಂದೆ ಬರಲು ಶಿಕ್ಷಣವೇ ಪ್ರಮುಖ ಅಸ್ತ್ರ. ಮಕ್ಕಳ ಜೀವನ ಹೇಗಿರಬೇಕು, ಯಾರ ಜತೆ ಒಡನಾಟ ಹೊಂದಿದ್ದಾರೆ. ಎಂಬೂದನ್ನು ಪಾಲಕರು ಗಮನಿಸಬೇಕು. ತೆಲಂಗಾಣದಲ್ಲಿ ಗಾಂಜಾ, ಮದ್ಯಕ್ಕೆ ದಾಸರಾಗುತ್ತಿರುವುದು ಕಳವಳಕಾರಿ ಬೆಳವಣಿಗೆ, ಮಕ್ಕಳಲ್ಲಿ ಪೋನ್ ಗೀಳು ಹೆಚ್ಚಾಗಿದೆ. ಇಲ್ಲಿ ಹೇಗಿದೆಯೋ ಹಾಗಾಗಿ ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿವಹಿಸಬೇಕು ಕರೆ ನೀಡಿದರು.
ಕಡು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ದು, “ಪೂರ್ಣ” ಎಂಬ ಯುವತಿ ಎವರೆಸ್ಟ್ ಪರ್ವತ ಏರಿ ಖ್ಯಾತಿ ಪಡೆದಿದ್ದಾರೆ. 8 ಯುವತಿಯರು ಪೈಲೆಟ್ ಆಗಿದ್ದಾರೆ ಎಂದು ಹೇಳಿದರು.
ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು. ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ,ನಿ.ಐಎಎಸ್ ಅಧಿಕಾರಿ ಬಾಬುರಾವ್ ಮುಡಬಿ, ಬಿಎಸ್ಪಿ ರಾಜ್ಯ ಸಂಯೋಜಕ ಆರ್. ಮುನಿಯಪ್ಪ, ವಾಸುದೇವ , ಮುಖ್ಯಾಧಿಕಾರಿ ಭಾರತಿ ದಂಡೋತಿ,ಚನ್ನಪ್ಪ ಬೂದಿಹಾಳ ಇದ್ದರು. ವ್ಯವಸ್ಥಾಪಕ ರಮೇಶ ಅನಸೂರ್ ಅಧ್ಯಕ್ಷತೆವಹಿಸಿದ್ದರು.