ಸ್ವಾಮಿಜೀ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ತಂಡ | ಸ್ವಾಮಿಜೀಯಿಂದ ಪೊಲೀಸರಿಗೆ ಪತ್ರ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಚಂದ್ರಶೇಖರನಾಥ ಮಹಾ ಸ್ವಾಮೀಜಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವತ ತಂಡ ಭೇಟಿಯಾಗಿದೆ.
ಸ್ವಾಮಿಜೀ ವಿರುದ್ಧ ಎಫ್ಐಆರ್ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಇಂದು ಶ್ರೀಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದು ಪ್ರಕರಣದ ಕುರಿತು ಚರ್ಚಿಸಿ ರಾಜ್ಯ ಬಿಜೆಪಿ ಸದಾಕಾಲ ಜತೆಗೆ ನಿಲ್ಲಲಿದೆ ಎಂಬ ಅಭಯವನ್ನು ನೀಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾತನಾಡಿದ ಬಿವೈವಿ, ರಾಜಕೀಯ ಪ್ರೇರಿತವಾಗಿ ಸ್ವಾಮೀಜಿಗಳ ವಿರುದ್ಧ ಎಫ್ಐಆರ್ ದಾಖಲಾಗುವ ಮುನ್ನವೇ ಸಮರ್ಪಕ ಸೌಹಾರ್ದತೆಯ ಪ್ರತೀಕವಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ, ಆದಾಗ್ಯೂ ಶ್ರೀಗಳಿಗೆ ಕಿರುಕುಳ ನೀಡುವ ಪ್ರವೃತ್ತಿಯನ್ನು ರಾಜ್ಯ ಸರ್ಕಾರ ಮುಂದುವರೆಸಿದರೆ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾದೀತು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಚಲುವಾದಿ ನಾರಾಯಣಸ್ವಾಮಿ ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ , ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ ರುದ್ರೇಶ್, ಮುಖಂಡ ಅನಿಲ್ ಚಳಗೇರಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ವಾಮಿಜೀಯಿಂದ ಪೊಲೀಸರಿಗೆ ಪತ್ರ : ಡಿ. 2ರಂದು ಸ್ವಾಮಿಜೀ ಉಪ್ಪಾರಪೇಟ ಪೊಲೀಸ್ ಠಾಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆರೋಗ್ಯ ಸರಿ ಇಲ್ಲದ ಕಾರಣ ಶ್ರೀಗಳು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಹುಷಾರಾದ ಬಳಿಕ ಬರುವುದಾಗಿ ಸಮಯ ಕೇಳಿದ್ದಾರೆ. ತಮಗೆ 80 ವರ್ಷ ಮೇಲ್ಪಟ್ಟು ವಯಸ್ಸು, ಮಠಕ್ಕೆ ಬಂದು ಹೇಳಿಕೆ ಪಡೆದರೆ ಏನು ಅಭ್ಯಂತರವಿಲ್ಲ ಎಂದು ಶ್ರೀಗಳು ಹೇಳಿದ್ದಾರೆ ಎನ್ನಲಾಗಿದೆ.