ಕಲಬುರಗಿ ವಿಭಾಗ ಮಟ್ಟದ 14, 17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಉದ್ಘಾಟನೆ | ದೈಹಿಕ- ಮಾನಸಿಕ ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟ ಗಳಲ್ಲಿ ಭಾಗವಹಿಸಲು ಸಚಿವ ಶರಣಬಸಪ್ಪ ದರ್ಶನಾಪುರ ಕರೆ
ಯಾದಗಿರಿ: ಪರಿಪೂರ್ಣ ವಿದ್ಯಾರ್ಥಿಯಾಗಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ದೈಹಿಕ-ಮಾನಸಿಕ ಉತ್ತಮ ಆರೋಗ್ಯಕ್ಕೆ ಕಡ್ಡಾಯ ರೂಡಿ ಮಾಡಿಕೊಳ್ಳಬೇಕೇಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸೋಮವಾರ ಆಯೋಜಿಸಿದ್ದ “ಕಲಬುರಗಿ ವಿಭಾಗ ಮಟ್ಟದ 14,17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ” ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು,ಗೆಲುವು ಮುಖ್ಯವಲ್ಲ, ಭಾಗವಹಿಸಿ ಗುರಿ ಮುಟ್ಟುವ ಉದ್ದೇಶವಿರಬೇಕೆಂದರು.
ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಅಳಿಸಲು ವಿದ್ಯಾರ್ಥಿಗಳು ಓದು ಮತ್ತು ಕ್ರೀಡೆಗಳನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಇಂದು ಕ್ರೀಡಾ ಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಇಲ್ಲಿಯೂ ಸಾಧನೆ ಮಾಡುವ ಮೂಲಕ ತಮ್ಮ ಜೀವನ ರೂಪಿಸಿಕೊಂಡು ಜಿಲ್ಲೆಯ ಮತ್ತು ದೇಶದ ಕೀರ್ತಿ ವಿಶ್ವವ್ಯಾಪಿ ಪಸರಿಸಬಹುದೆಂದು ಸಚಿವರು ಬಹು ಮಾರ್ಮಿಕವಾಗಿ ಹೇಳಿದರು.
ದೇಶಿ ಕ್ರೀಡೆಗಳಿಗೆ ಸರ್ಕಾರಗಳು ಈಗ ಹೆಚ್ಚು ಉತ್ತೇಜನ ನೀಡುತ್ತಿವೆ. ನಮ್ಮ ಭಾಗದ ಕ್ರೀಡೆಗಳಾದ ಕೋಕೋ, ಕಬ್ಬಡಿ, ಕುಸ್ತಿ, ಕೇರಂ, ಬಿಲ್ಲುಗಾರಿಗೆ, ವೇಗದ ಓಟ ಹೀಗೆ ಅನೇಕ ಕ್ರೀಡೆಗಳಲ್ಲಿ ಮಕ್ಕಳು ತಮ್ಮ ಸಾಧನೆ ಮೆರೆಯಬೇಕು.ಕ್ರೀಡಾ ಕ್ಷೇತ್ರದಲ್ಲಿ ಪರಿಪೂರ್ಣ ಪರಿಣತಿ ಹೊಂದಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಚಿವರು ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಇಲ್ಲಿನ ಅಧಿಕಾರಿ ಕ್ರಮ ತೆಗೆದುಕೊಳ್ಳಬೇಕು, ಕ್ರೀಡಾಗಳುಗಳಿಗೆ ಯಾವುದೇ ತೊಂದರೆಯಾಗದಂತೆಯೇ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಬೇಕೆಂದು ಸಚಿವರು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಧನೆ ಮೆರೆದಿದ್ದು ನಮಗೆಲ್ಲ ಹೆಮ್ಮೆ ಎಂದರು.
ಆಟ ಆಡುವಾಗ ಸ್ಪರ್ಧಾ ಮನೋಭಾವನೆ ಇರಲಿ, ನಂತರ ಎಲ್ಲರೂ ಅಣ್ಣ, ತಮ್ಮ, ಅಕ್ಕ, ತಂಗಿಯರಂತೇ ಇರಬೇಕು, ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಬೇಕು.ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕು. ಸೋತಾಗ ಮನನೊಂದದೇ ಧೈರ್ಯದಿಂದ ಮುಂದಿನ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಹೇಳಿದರು.
ಆರಂಭದಲ್ಲಿ ಕ್ರೀಡಾಮಕ್ಕಳಿಂದ ಕವಾಯಿತು ನಡೆಯಿತು, ಕ್ರೀಡಾಜ್ಯೋತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಸ್ವಾಗತಿಸಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ, ಡಿಡಿಪಿಐ ಸಿ.ಎಸ್.ಮುದೋಳ್, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿಗಳಾದ ರಾಜು ಬಾವಿಹಳ್ಳಿ, ಡಯಟ್ ಪ್ರಾಂಶುಪಾಲ ವೃಷಬೇಂದ್ರ, ಅನೀಲಕುಮಾರ ನಾಯಕ್, ಚಂದ್ರಶೇಖರಗೌಡ ಪಾಟೀಲ್, ಅಶೋಕ ಕೆಂಭಾವಿ, ಮುಖಂಡರಾದ ಬಸರೆಡ್ಡಿ ಅನಪೂರ, ಸಿದ್ದಲಿಂಗರಡ್ಡಿ, ಬಸವರಾಜ ಪಾಟೀಲ್ ಬಿಳ್ಹಾರ್ ಸೇರಿದಂತೆಯೆ ಇತರರಿದ್ದರು.
ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಕಲ್ಬುರ್ಗಿ ವಿಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಜಿಲ್ಲೆಗಳು ಸೇರಿದಂತೆಯೇ ಏಳು ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆಯಾದ ಕೆ.ಹೊಸಳ್ಳಿ ಗ್ರಾಮ ದ ವಿದ್ಯಾರ್ಥಿ ಕೆ.ಸಿದ್ಧಾರ್ಥ ಅವರನ್ನು ಸಚಿವರು ಸನ್ಮಾನಿಸಿದರು.