ಅಧಿವೇಶನದಲ್ಲಿ ‘ಆಶಾ’ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಶಾಸಕರಿಗೆ ಮನವಿ| ಉಸ್ತುವಾರಿ ಸಚಿವರಿಗೂ ಪತ್ರ 

ಬೆಂಗಳೂರು /ಯಾದಗಿರಿ: ಆಶಾ ಕಾರ್ಯಕರ್ತೆಯರ ಮಾಸಿಕ ವೇತನ 15 ಸಾವಿರ ನಿಗದಿ ಮಾಡುವುದು ಸೇರಿ ವಿವಿಧ ಬೇಡಿಕೆ ಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕೋರಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ) ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಗೆ ಸಂಯೋಜಿತ ಜಿಲ್ಲಾ ಸಮಿತಿ ಶಾಸಕರುಗಳಿಗೆ ಮನವಿ ಪತ್ರ ಸಲ್ಲಿಸಿದೆ.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಮುಖಂಡರು, ಸಮಸ್ಯೆಗಳನ್ನು ಹೇಳಿಕೊಂಡರು.

ನೂರಾರು ಸಂಖ್ಯೆಯ ಆಶಾ ಕಾರ್ಯಕರ್ತೆಯರು ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಕೊಡಲು ಆರೋಗ್ಯ ಇಲಾಖೆಯಲ್ಲಿ ಪರಿಶ್ರಮಿಸುತ್ತಿದ್ದು, ರಾಜ್ಯದಲ್ಲಿ ಸರಿ ಸುಮಾರು 42000 ಆಶಾ ಕಾರ್ಯಕರ್ತೆಯರು ಮಹತ್ತರವಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಹಳ್ಳಿ ಮತ್ತು ನಗರದ ಬೇರು ಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಮಗ್ರ ಅಭಿವೃದ್ಧಿ ಯ ಕುರಿತು ಸಮಾಜದ ಆರೋಗ್ಯಕರ ಬದಲಾವಣೆಗೆ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಹಾಗೆಯೇ ಕೋವಿಡ್- 19 ಸಂದರ್ಭದಲ್ಲಿ ಈ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆ.

ಈ ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ ಗಳನ್ನಾಗಿ ನೇಮಕ ಮಾಡಿ ಕೊಂಡು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲಾಗುತ್ತದೆ ಎಂಬುದು ಸರ್ಕಾರದ ಘೋಷಣೆ. ಆದರೆ ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲವೆಂಬುದು ವಾಸ್ತವ.

ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಆಶಾನಿಧಿ ಪೋರ್ಟಲ್‌ನಲ್ಲಿ ಆನ್ಲೈನ್ ದಾಖಲು ಮಾಡಬೇಕಿದ್ದು, ಆಶಾಗಳು ಮಾಡಿದ ಕೆಲಸಗಳು ದಾಖಲಾಗದೆ ಕಳೆದ 8 ವರ್ಷಗಳಿಂದ ಮಾಡಿದ ಕೆಲಸಕ್ಕೆ ಪ್ರೋತ್ಸಾಹ ಧನ ಸಿಗುತ್ತಿಲ್ಲ.

ಹಲವಾರು ಸಮಸ್ಯೆಯಿಂದ ಆಶಾ ಕಾರ್ಯಕರ್ತೆಯರಿಗೆ ಬಹು ದೊಡ್ಡ ಪ್ರಮಾಣದ ಅನ್ಯಾಯ ಆಗುತ್ತಿದೆ” ಸಮಸ್ಯೆಗಳ ಕುರಿತು ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಸುಮಾರು ವರ್ಷಗಳಿಂದ ಲೆಕ್ಕವಿಲ್ಲದಷ್ಟು ದೂರುಗಳನ್ನು ಸಲ್ಲಿಸಲಾಗಿದೆ. ಲೆಕ್ಕವಿಲ್ಲದಷ್ಟು ಸಭೆಗಳು, ಚರ್ಚೆಗಳು ನಡೆದಿವೆ.

ಇಲಾಖೆಯಿಂದ ಮತ್ತು ಸರ್ಕಾರದಿಂದ ಕೈಗೊಂಡ ಯಾವುದೇ ಕ್ರಮದಿಂದ ಸಮಸ್ಯೆ ಪರಿಹಾರವಾಗದೇ ಹಾಗೆಯೇ ಉಳಿದಿದ್ದು, ಇದರಿಂದ ಪ್ರತಿಯೊಬ್ಬ ಆಶಾ ಸಾವಿರಾರು ರೂ. ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಸಂಘಟನೆ ಮನವರಿಕೆ ಮಾಡಿದೆ.

2024ರ ಫೆಬ್ರವರಿಯಲ್ಲಿ ಹೋರಾಟ ನಡೆದು ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆ ಬಗೆಹರಿಸಲು ಭರವಸೆ ನೀಡಿದ್ದರು, ಉಪ ಮುಖ್ಯಮಂತ್ರಿಯೂ ನೀಡಿದ ಭರವಸೆ ಹುಸಿಯಾಗಿದೆ. ಈವರಿಗೆ ಸಮಸ್ಯೆಗೆ ಪರಿಹಾರ ಸಿಕ್ಕಲ್ಲ ಎಂದು ವಿವರಿಸಿದ್ದಾರೆ.

ನಿರಂತರವಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎ.ಸಿ.ಎಸ್ ಅವರ ಜೊತೆಯಲ್ಲಿ 2 ಬಾರಿ ಸಭೆಗಳು ನಡೆದರೂ ಸಮಸ್ಯೆ ಬಗೆಹರಿದಿಲ್ಲ. ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತರು, ಎನ್.ಎಚ್.ಎಂ ಸೇರಿದಂತೆ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ಜೊತೆಯಲ್ಲಿ 13 ಬಾರಿ ಸಭೆಗಳು ನಡೆದಿವೆ.

ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತೆಯರು ಲೆಕ್ಕವಿಲ್ಲದಷ್ಟು ಸಂದರ್ಭಗಳಲ್ಲಿ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಚಿವರು, ಶಾಸಕರು ಮತ್ತು ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಿ ಎಂದು ಕೋರಿಕೊಂಡಿದ್ದರು ಪ್ರಯೋಜನವಾಗಿಲ್ಲ.

ಫೆಬ್ರುವರಿ ಹೋರಾಟದ ನಂತರ ಕಳೆದ 9 ತಿಂಗಳುಗಳ ಅವಧಿಯಲ್ಲಿ ಸರ್ಕಾರ ಮತ್ತು ಇಲಾಖೆಯ ಜೊತೆಯಲ್ಲಿ ಒಟ್ಟು 15 ರಾಜ್ಯ ಮಟ್ಟದ ಸಭೆಗಳು ನಡೆದರೂ ಆಶಾ ಕಾರ್ಯಕರ್ತೆ ಯರ ಮಾಸಿಕ ಕನಿಷ್ಟ ಗೌರವಧನ ಸೇರಿದಂತೆ ಇತರ ಪ್ರಮುಖ ಬೇಡಿಕೆಗಳಲ್ಲಿ ಯಾವೊಂದೂ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಘಟನೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಇದೀಗ ಸ್ಥಳೀಯ ಶಾಸಕರಿಂದ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯ ಸಂಘಟನೆ ಮಾಡುತ್ತಿದ್ದು, ಆಶಾ ಕಾರ್ಯಕರ್ತೆ ಯರಿಗೆ ಮಾಸಿಕ 15 ಸಾವಿರ ಗೌರವ ಧನ ಸೇರಿದಂತೆ ಇತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದೆ.

ಶಾಸಕರಿಂದ ಸರ್ಕಾರದ ಗಮನ ಸೆಳೆಯುವ ಭರವಸೆ: ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ರವರು, ಸವಿವರವಾಗಿ ಚರ್ಚಿಸಿ, ಪ್ರಶ್ನಾವಳಿ ವೇಳೆಯಲ್ಲಿ ಬೇಡಿಕೆಗಳ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದ್ದಾರೆ. ತಮ್ಮ ಆಪ್ತ ಸಹಾಯಕರಿಗೆ ಫೋನ್ ಮೂಲಕ ಕರೆ ಮಾಡಿ ಈ ಕುರಿತು ಇಂದೇ ಪ್ರಶ್ನಾವಳಿಯಲ್ಲಿ ವಿಷಯ ಸೇರಿಸಲು ಹೇಳಿದರು. ಇನ್ನು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್, ಮುಖಂಡರಾದ ಕೃಪಾ, ಶಾರದಾದೇವಿ, ನಾಗಮ್ಮ, ನಾಗೇಂದ್ರಮ್ಮ, ಶ್ರೀದೇವಿ, ಗೌರಮ್ಮ, ಸಾವಿತ್ರಿ, ಲಕ್ಷ್ಮೀ, ಗಂಗಮ್ಮ, ವಿಜಯಲಕ್ಷ್ಮೀ ಸೇರಿದಂತೆ ಇತರರಿದ್ದರು.

ಪ್ರಮುಖ ಹಕ್ಕೊತ್ತಾಯಗಳು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈಗಿರುವ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ಒಟ್ಟು 12 ಸಾವಿರ ಮತ್ತು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ 3 ಸಾವಿರ ಹೆಚ್ಚಳ ಸೇರಿಸಿ,15 ಸಾವಿರ ಮಾಸಿಕ ಗೌರವಧನ ನಿಗದಿ ಮಾಡುವುದು.

ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 2 ಸಾವಿರದಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು.

ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊ ಳ್ಳುತ್ತಿ ರುವುದನ್ನು ಕೈಬಿಡಿ. ಅಥವಾ ಮೊಬೈಲ್ ಡಾಟಾ ಒದಗಿಸಿ. ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಿ, ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದು.

60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ 3 ಲಕ್ಷಕ್ಕೆ ಹೆಚ್ಚಿಸಬೇಕು.

ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವ ಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.

ಆಶಾ ಸೇವೆಯಲ್ಲಿ ಇದ್ದಾಗ ಆಗುವ ಅನಾಹುತಗಳಿಗೆ ಸಂಪೂ ರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು. ಪ್ರತಿವರ್ಷ ಪ್ರತೀ ಆಶಾ ಕಾರ್ಯಕರ್ತೆಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ಮಾಡಬೇಕು.

ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್-ಇಎಸ್‌ಐ ಸೌಲಭ್ಯ ನೀಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳು.

Spread the love

Leave a Reply

Your email address will not be published. Required fields are marked *

error: Content is protected !!