ಕಬ್ಬು ಬೆಳೆಗಾರರಿಗೆ ಸಕಾಲಕ್ಕೆ ಕಬ್ಬು ದರ ಪಾವತಿಸಲು ಸೂಚನೆ | ವಿಳಂಬ ಧೋರಣೆ ಅನುಸರಿಸದಂತೆ ಸಲಹೆ
ಯಾದಗಿರಿ: ಜಿಲ್ಲೆಯ ರೈತ ಕಬ್ಬು ಬೆಳೆಗಾರರಿಗೆ ಪ್ರಸಕ್ತ ವರ್ಷ ಪ್ರತಿ ಟನ್ ಕಬ್ಬಿಗೆ 2,700 ರೂ.ಗಳ ದರ ನಿಗದಿಪಡಿಸಲು ನಿರ್ಣಯ ಕೈಗೊಳ್ಳಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರ ರೈತರ ಸಮಸ್ಯೆ ಆಲಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು, ಈವರೆಗೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ 2,650 ರೂ ನೀಡಲಾಗಿದೆ. ಈ ಬಾರಿ ದರವನ್ನು 2700 ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡುವ ರೈತರಿಗೆ ಸಕಾಲಕ್ಕೆ ಕಬ್ಬು ದರ ಪಾವತಿಯಾಗಬೇಕು. ಬಹುತೇಕ ರೈತರು ಕಬ್ಬು ಕಟಾವು ಸಂದರ್ಭದಲ್ಲಿ ಕೃತಕ ಕಾರ್ಮಿಕರ ಅಭಾವ ಸೃಷ್ಟಿ, ಕಬ್ಬು ದರ ಪಾವತಿಯಲ್ಲಿ ವಿಳಂಬಧೋರಣೆ ಅನುಸರಿಸುತ್ತಿರುವದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ವಿಶೇಷ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ರೈತರೊಂದಿಗಿನ ಒಡಂಬಡಿಕೆ ಅನ್ವಯ ಕಬ್ಬು ಕಟಾವು ಆಗಬೇಕು. ಗ್ರಾಮ ವಾರು, ರೈತರ ಕಬ್ಬು ಕಟಾವು ಬಗ್ಗೆ ಕೃಷಿ ಜಂಟಿ ನಿರ್ದೇಶಕರ ಸಮನ್ವಯದೊಂದಿಗೆ ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ ವೇಳಾಪಟ್ಟಿ ಪ್ರಕಟಿಸಬೇಕು. ಅದರಂತೆ ಕಬ್ಬು ದರ ಸಂದಾಯ, ಪಾವತಿಯಾದ ಮಾಹಿತಿಯು ಪ್ರಚುರಪಡಿಸಿ, ರೈತರಿಗೂ ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದರು.
ರೈತರಿಗೆ ಕಬ್ಬು ದರದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಕೃಷಿ,ಆಹಾರ ಇಲಾಖೆ,ಕಾನೂನು ಮಾಪನಾ ಶಾಸ್ತ್ರ ಇಲಾಖೆ ಅಧಿಕಾರಿಗಳ ಸಮಿತಿ ರಚನೆ ಮಾಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೈತರ ಕಬ್ಬು ಬೆಳೆ ದರ ನಿಗದಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಕೃಷಿ ಜಂಟಿ ನಿರ್ದೇಶಕರು ನೇತೃತ್ವದಲ್ಲಿ ಇದೇ ಸೋಮವಾರ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ರೊಂದಿಗೆ ಸಭೆ ನಡೆಸಲು ಸೂಚಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು ರತೀಂದ್ರನಾಥ ಸುಗೂರ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ, ಆಹಾರ ಇಲಾಖೆ ಉಪನಿರ್ದೇಶಕ ಅನಿಲಕುಮಾರ್ ಧವಳಗಿ , ರೈತ ಮುಖಂಡರಾದ ಲಕ್ಷ್ಮಿ ಕಾಂತ, ಮಹೇಶ್ ಗೌಡ ಸುಬೇದಾರ, ಚನ್ನಪ್ಪ ಆನೆಗುಂದಿ, ರಾಕೇಶಗೌಡ, ಚಂದ್ರಶೇಖರ, ಕಾಂತು ಪಾಟೀಲ್, ಮಲ್ಲಿಕಾರ್ಜುನ, ಶರಣಪ್ಪ ಇತರರಿದ್ದರು.