ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಕುರಿ ಮರಿ ಹಾರಿಸುವುದು ನಿಯಂತ್ರಣಕ್ಕೆ 6 ಕಡೆ ಚೆಕ್ ಪೋಸ್ಟ್
ಯಾದಗಿರಿ: ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು ಬರುವ ಜನೇವರಿ 12 ರಿಂದ 18 ರವರೆಗೆ ನಡೆಯಲಿದ್ದು,ಈ ಜಾತ್ರೆಯ ಅಂಗವಾಗಿ ಅವಶ್ಯಕ ಸುರಕ್ಷತಾ ಕ್ರಮಗಳು, ಸ್ವಚ್ಛತೆ ಹಾಗೂ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಆಂಧ್ರ, ಮಹಾರಾಷ್ಟ್ರ,ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ದರಿಂದ, ಈ ಬಾರಿ ಅಚ್ಚುಕಟ್ಟಾದ ಸುರಕ್ಷತಾ ಕ್ರಮಗಳನ್ನು ಪೋಲಿಸ್ ಇಲಾಖೆವತಿಯಿಂದ ಕೈಗೊಳ್ಳಬೇಕು.ದೇವಸ್ಥಾನದ ಪಲ್ಲಕ್ಕಿ ಉತ್ಸವ ಮೇಲಿನವರೆಗೂ ಹೋಗಿಬರಲು ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಜಾತ್ರೆಯ ಅಂಗವಾಗಿ ಕುರಿ ಮರಿಗಳನ್ನು ಹಾರಿಸುವದನ್ನು ಪ್ರಾಣಿ ಪ್ರತಿಬಂಧಕ ಕಾಯ್ದೆ ಅನ್ವಯ ನಿಷೇಧಿಸಲಾಗಿದೆ. ಇದರ ನಿಯಂತ್ರಣಕ್ಕಾಗಿ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನದ, ಸುತ್ತ ಮುತ್ತಲಿನ ಅವಶ್ಯಕ ಸ್ಥಳಗಳಲ್ಲಿ ಸುಣ್ಣ-ಬಣ್ಣ, ವಿದ್ಯುತ್ ದೀಪಾಲಂಕಾರ,ಬೀದಿದೀಪಗಳ ವ್ಯವಸ್ಥೆ ಕಲ್ಪಿಸಬೇಕು.ಭಕ್ತರಿಗೆ ತೊಂದರೆಯಾಗದಂತೆ ಸುಗಮ ಸಂಚಾರದ ವ್ಯವಸ್ಥೆ, ದೇವಸ್ಥಾನದ ರಸ್ತೆ ತೆರವು , ಮಾಡಬೇಕು. ಪಲ್ಲಕ್ಕಿ ಉತ್ಸವ ಹಾಗೂ ಸರಪಳಿ ಹರಿಯುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಶೌಚಾಲಯಗಳ ಸ್ವಚ್ಛತೆ, ನೀರಿನ ವ್ಯವಸ್ಥೆ, ಮೊಬೈಲ್ ಶೌಚಾಲಯಗಳ ವ್ಯವಸ್ಥೆ, ಪರೀಕ್ಷೆಗೆ ಒಳಪಡಿಸಿದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆಯ ಅಂಗವಾಗಿ ಅಗ್ನಿ ಅವಘಡ ಸಂಭವಿಸದಂತೆ ಅವಶ್ಯಕ ಮುನ್ನೆಚ್ಚರಿಕೆವಹಿಸಬೇಕು. ನುರಿತ ಈಜುಗಾರರು ಇರಬೇಕು. ಲೈಫ್ ಜಾಕೇಟ್, ಬೋಟಿಂಗ್ ವ್ಯವಸ್ಥೆ, ಜಾತ್ರೆ ಸ್ಥಳಗಳಲ್ಲಿ ಹೆಚ್ಚು ವರಿ ಸಿಬ್ಬಂದಿಗಳ ನೇಮಕ, ಪ್ರತಿ ಅಮಾವಾಸ್ಯೆ ಸಂದರ್ಭ ದಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಭಕ್ತಾದಿಗಳ ಅನುಕೂಲ ಕ್ಕಾಗಿ ಬಸ್ ಗಳ ವ್ಯವಸ್ಥೆ, ಹೆಚ್ಚುವರಿಯಾಗಿ 100 ಬಸ್ ಗಳ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಪರಿಸ್ಥಿತಿಯಲ್ಲಿ ಕೆರೆ ನೀರು ಕಲುಷಿತವಾಗದಂತೆ ನಿಗಾವಹಿಸಬೇಕು. ಸಾರ್ವಜನಿಕರೂ ಕೂಡ ಇದಕ್ಕೆ ಸಹಕರಿ ಸಬೇಕು.ಬಟ್ಟೆ ಗಳನ್ನು,ಕಸವನ್ನು ಕೆರೆಯಲ್ಲಿ ಚೆಲ್ಲದಂತೆ ಎಚ್ಚರಿಕೆವಹಿಸಬೇಕು.
ಅರಕೇರಾ ಮತ್ತು ರಾಮಸಮುದ್ರ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ ತೆರೆದಿಡಲು ನಿಷೇಧಿಸಲಾಗುವುದು. ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೋಗ ರುಜಿನಗಳು ಹರಡದಂತೆ ಅವಶ್ಯಕ ಮುಂಜಾಗೃತಾ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆಯ ಅಂಗವಾಗಿ ಅವಶ್ಯಕ ಕಡೆಗಳಲ್ಲಿ ಸೈನ್ ಬೋರ್ಡ ಹಾಕಿಸಬೇಕು.ಕಲ್ಯಾಣ ಮಂಟಪದ ಸ್ವಚ್ಛತೆಗೆ ವಿಶೇಷ ಗಮನ, ಪೋಲಿಸ್ ಸಿಬ್ಬಂದಿಗಳಿಗೆ ಸೂಕ್ತ ವಾಸ್ತವ್ಯಕ್ಕಾಗಿ ಕಲ್ಯಾಣ ಮಂಟಪ, ವಸತಿಗೃಹಗಳ ವ್ಯವಸ್ಥೆ, ,ದೇವಸ್ಥಾನದ ಜಾಗ ಮತ್ತು ರಸ್ತೆ ಬದಿಯಲ್ಲಿನ ಅನಧಿಕೃತ ಅಂಗಡಿ ಮುಂಗಟ್ಟುಗಳ ತೆರವು ಮಾಡಬೇಕು ಎಂದು ಸೂಚಿಸಿ ಒಟ್ಟಾರೆ ಈ ಜಾತ್ರೆ ಸಮಯದಲ್ಲಿ ದೇವಸ್ಥಾನದ ಕಾರ್ಯಕ್ರಮ ಗಳು ಅಚ್ಚುಕಟ್ಟಾಗಿ, ಯಾವುದೇ ಲೋಪವಿಲ್ಲದೆ ನಡೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಡಿವೈಎಸ್ಪಿ ಅರುಣ್ ಕುಮಾರ್, ಮುಜರಾಯಿ ತಹಸೀಲ್ದಾರ ಪಿ. ಶಾಂತಮ್ಮ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.