ಜಿಲ್ಲಾಡಳಿತದಿಂದ ಬುಳ್ಳಾಪೂರದ ಶಾರದಾ ಮಕ್ಕಳಿಗೆ ₹8.25 ಲಕ್ಷ ಪರಿಹಾರ ವಿತರಣೆ

ರಾಯಚೂರು: ದೌರ್ಜನ್ಯ ಪ್ರಕರಣದಲ್ಲಿ ಮೃತರಾದ ವಾಲ್ಮೀಕಿ ನಾಯಕ ಸಮುದಾಯದ ಮಹಿಳೆ ಶಾರದಾ ಕುಟುಂಬಸ್ಥರಿಗೆ  ಜಿಲ್ಲಾಡಳಿತದಿಂದ ₹8.25 ಲಕ್ಷ ರು. ಪರಿಹಾರ ಧನ ನೀಡಲಾಗಿದ್ದು, ಪ್ರತಿ ತಿಂಗಳು 7 ಸಾವಿರ ಪಿಂಚಣಿಯನ್ನು ಮಂಜೂರುಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಆದೇಶಿಸಿದ್ದಾರೆ.

ತಾಲ್ಲೂಕಿನ ಬುಳ್ಳಾಪೂರು ಗ್ರಾಮದಲ್ಲಿ 2023ರ ಜುಲೈನಲ್ಲಿ ದೌರ್ಜನ್ಯ ಪ್ರಕರಣದಲ್ಲಿ ಶಾರದಾ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಕುಟುಂಬಕ್ಕೆ ಆಸರೆಯಾಗಿದ್ದ ಶಾರದಾ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದರು‌. ಇದನ್ನು ಗಮನಿಸಿ ದೌರ್ಜನ್ಯ ನಿಯಂತ್ರಣ ನಾಮನಿರ್ದೇಶಕ ಸದಸ್ಯರಾದ ಎನ್. ರಘುವೀರ್ ನಾಯಕ ಅವರು ಕುಟುಂಬದ ಪರವಾಗಿ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳು ವಿಶೇಷ ಮುರ್ತುವರ್ಜಿ ವಹಿಸಿ ಅವರಿಗೆ ಪರಿಹಾರ ಮತ್ತು ಇತರೆ ಸೌಲಭ್ಯ ಒದಗಿಸುವಲ್ಲಿ ಶ್ರಮವಹಿಸಿದ್ದಾರೆ. ಹಳೆ ಪ್ರಕರಣಗಳಲ್ಲಿ ಬಾಕಿ ಉಳಿದ ಪ್ರಕರಣಗಳು ಸಹ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು – ಎನ್. ರಘುವೀರ್ ನಾಯಕ, ದೌರ್ಜನ್ಯ ನಿಯಂತ್ರಣ ನಾಮನಿರ್ದೇಶಕ ಸದಸ್ಯರು.

ಸಂತ್ರಸ್ತರ ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತ ಶಾರದಾ ಅವರ ಇಬ್ಬರು ಮಕ್ಕಳ ಜಂಟಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದೆ. ಈಗ ಶಾರದಾ ಅವರ ಮಕ್ಕಳಿಗೆ ಪಿಂಚಣಿ ನೀಡಲು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಪಿಂಚಣಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ಪಿಂಚಣಿ ಹಣ ಬಳಕೆ ಮಾಡಲು ಸಲಹೆ ನೀಡಲಾಗಿದೆ. ಇಬ್ಬರು ಮಕ್ಕಳನ್ನು ವಸತಿ ಶಾಲೆಗೆ ದಾಖಲಾತಿ ಕೊಡಿಸುವಂತೆ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನನ್ನ ತಂಗಿಯ ಮಕ್ಕಳಿಗೆ ಪರಿಹಾರ ಧನ ಹಾಗೂ ಪಿಂಚಣಿಯಿಂದ ಅನುಕೂಲ ಆಗಿದೆ. ಇದರ ಜೊತೆಗೆ ಸರ್ಕಾರಿ ನೌಕರಿ ನೀಡಿದರೆ ಇನ್ನಷ್ಟು ಅನುಕೂಲ ಆಗಲಿದೆ ಎಂದು ಮೃತರ ಸಹೋದರ ರಾಮಕೃಷ್ಣ ನಾಯಕ ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಸರ್ಕಾರದಿಂದ ಸಹಾಯಧನವನ್ನು ನೀಡಲಾಗಿದ್ದು, ಪಿಂಚಣಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮಕ್ಕಳನ್ನು ವಸತಿ ಶಾಲೆಗೆ ಸೇರಿಸಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು – ಚಿದಾನಂದ, ಸಮಾಜ ಕಲ್ಯಾಣ ಅಧಿಕಾರಿ.

Spread the love

Leave a Reply

Your email address will not be published. Required fields are marked *

error: Content is protected !!