ಬೀದರ : ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರರು ಆಗಬಯಸುವ ವಿದ್ಯಾರ್ಥಿಗಳು ಪ್ರಸ್ತಕ ಓದುವಿಕೆ ಹಾಗೂ ವಿಷಯ ಗೃಹಿಸುವಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆ, ಉಪ ಸಂಪಾದಕರಾದ ರಶ್ಮಿ ಎಸ್.ಅವರು ಅಭಿಪ್ರಾಯಪಟ್ಟರು.
ಸೋಮವಾರ ಬಿ.ವ್ಹಿ.ಭೂಮರೆಡ್ಡಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರ ಯದಲ್ಲಿ ಪತ್ರಿಕೋದ್ಯಮದಲ್ಲಿ ಅವಕಾಶಗಳು ಕುರಿತು ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕನ್ನಡ ಭಾಷೆಯನ್ನು ಸಾಂಪ್ರದಾಯಕ ಹಾಗೂ ಪಾರಂಪರಿಕವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಭಾಷೆಯನ್ನೆ ಬಂಡವಾಳ ವಾಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅನುವಾದದ ಜಾಣ್ಮೆ ಇರಬೇಕು. ವಿಶೇಷ ಲೇಖನ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜನರ ಜೊತೆ ಬೆರೆತುಕೊಂಡಷ್ಟು ಬರವಣಿಗೆಗೆ ವೈವಿದ್ಯಮಯ ದೃಷ್ಟಿಕೋನ ದೊರೆಯುತ್ತದೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಬೀದರ ಜಿಲ್ಲಾಧ್ಯಕ್ಷರಾದ ಭಾರತಿ ವಸ್ತ್ರದ ಅವರು ಮಾತನಾಡಿ, ಹುಟ್ಟಿನಿಂದ ಚಟ್ಟದವರೆಗೆ ತಾಯಿಭಾಷೆಯಾಗಿರುವ ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಬೇಕೆಂದರು. ಎಲ್ಲರೂ ಪ್ರಥಮಭಾಷೆ ಕನ್ನಡದಲ್ಲಿ ಶಿಕ್ಷಣ ಕಲಿಯಬೇಕು. ಓದು ಬರಹ ಲೆಕ್ಕಾಚಾರದ ಮೂಲ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕೆಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ, ಆಧುನಿಕ ವಿಜ್ಞಾನ ತಂತ್ರಜ್ಞಾನದಲ್ಲಿ ಮಾಧ್ಯಮದ ವಿಸ್ತಾರ ಸಾಕಷ್ಟು ಬೆಳೆದಿದೆ. ವಿದ್ಯಾರ್ಥಿಗಳು ಯುಟ್ಯೂಬ್ ಚಾನೆಲ್, ವೆಬ್ ಆಪ್‍ಗಳನ್ನು ಬಳಸಿ ಸುದ್ದಿ ಪ್ರಚಾರ ಮಾಡಬಹುದು ಎಂದರು.
ವೇದಿಕೆಯಲ್ಲಿ ಉಪ ಪ್ರಾಚಾರ್ಯರ ಡಾ.ಅನಿಲಕುಮಾರ ಅಣದೂರೆ, ರೇಣುಕಾ ಮಳ್ಳಿ, ರತಿದೇವಿ ಜಿ.ಕೆ. ಹಾಗೂ ಇತರರು ವೇದಿಕೆಯಲ್ಲಿದ್ದರು. ಅತಿಥಿಗಳಿಂದ ಆರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಸಿಗೆ ನೀರೆರೆಯಲಾಯಿತು.