ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ | ತಾಂತ್ರಿಕ ಸಮಿತಿ ರಚನೆಗೆ ಸಿಎಂ ಭರವಸೆ | ಸಚಿವರು,ಬೀದರ ಶಾಸಕರು ಭಾಗಿ

ಬೆಳಗಾವಿ: ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡುವ ಉದ್ದೇಶದಿಂದ  ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆದಿದೆ.

ಸಂತ್ರಸ್ತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿ ಅವರು ಘೋಷಿಸಿದ್ದಾರೆ ಎಂದು ಸಚಿವರು ತಮ್ಮ ಇಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

1970ರ ದಶಕದಲ್ಲಿ ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸಾಕಷ್ಟು ಕುಟುಂಬಗಳು ಇಂದಿಗೂ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಈ ಸಮಸ್ಯೆ ಮಾನವೀಯತೆ ಮತ್ತು ನ್ಯಾಯತೆಯ ನೆಲೆಗಟ್ಟಿನಲ್ಲಿ ಪರಿಹಾರ ಹೊಂದಲು ಸರ್ಕಾರವೊಂದು ನಿರ್ಣಾಯಕ ಹೆಜ್ಜೆ ಇಡಬೇಕಾಗಿದೆ.

ತಾವು ಈ ವಿಷಯವನ್ನು ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಸ್ತಾಪಿಸಿ, ಸಂತ್ರಸ್ತರಿಗೆ ಒಂದು ಬಾರಿಯ ವಿಶೇಷ ಪ್ಯಾಕೇಜ್ (ಕೃಪಾಧನ) ಘೋಷಿಸಲು ಮನವಿ ಮಾಡಿದ್ದು, ಭೂಮಿ ಕಳೆದುಕೊಂಡ ಕುಟುಂಬಗಳ ಪುನರ್ವಸತಿ ಮತ್ತು ಅವರ ಬದುಕು ಮರಳಿ ಸ್ಥಿರಗೊಳ್ಳಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ ಎಂದಿದ್ದಾರೆ.

ತಾಂತ್ರಿಕ ಸಮಿತಿ ರಚನೆ ಮಾಡುವ ಮೂಲಕ ಸುಧಾರಿತ ಪರಿಹಾರ ಕಂಡು ಹಿಡಿಯಲು ನಮ್ಮ ಸರ್ಕಾರ ಬದ್ಧತೆಯುಳ್ಳ ಹೆಜ್ಜೆ ಇಡುತ್ತಿದೆ. ತಾವೂ ಸಂತ್ರಸ್ತರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ಭೂಮಿ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಸಂಬಂಧಿಸಿ ದಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಜಿಲ್ಲೆಯ ರೈತ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಶಾಸಕರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹಿಂ ಖಾನ್, ಕೆಕೆ ಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಔರಾದ್ ಶಾಸಕರಾದ ಪ್ರಭು ಚವ್ಹಾಣ, ಬೀದರ ದಕ್ಷಣ ಶಾಸಕ ಶೈಲೇಂದ್ರ ಬೆಲ್ದಾಳೆ, ಹುಮನಾಬಾದ್ ಶಾಸಕ ಸಿದ್ದು ಪಾಟೀಲ, ಬಸವ ಕಲ್ಯಾಣ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಎಂ. ಜಿ ಮೂಳೆ, ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖ‌ರ್ ಪಾಟೀಲ್‌, ಭೀಮರಾವ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ, ಮತ್ತು ರಾಜ್ಯ ನೀರಾವರಿ ಇಲಾಖೆ ಅಧಿಕಾರಿಗಳು, ಕಾರಂಜಾ ಸಂತ್ರಸ್ತರ ಹೋರಾಟ ಸಮಿತಿ ರೈತ ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!