ಪತ್ರಕರ್ತರಿಗಾಗಿ ಧ್ಯಾನ | ಒತ್ತಡ ಮುಕ್ತಿಗಾಗಿ ಪತ್ರಕರ್ತರು ಧ್ಯಾನ ಮಾಡಬೇಕು: ಆರ್ಟ್ ಆಫ್ ಲಿವಿಂಗ್‌ನ ಎಸ್.ಎಚ್. ರಡ್ಡಿ ಸಾವೂರ
ಯಾದಗಿರಿ: ಪತ್ರಕರ್ತರು ಒತ್ತಡದ ಮುಕ್ತಿಗಾಗಿ ಧ್ಯಾನ ಮಾಡಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರುದೇವ ಅವರ ಆರ್ಟ್ ಆಫ್ ಲಿವಿಂಗ್ ನ ಜಿಲ್ಲಾ ಸಂಯೋಜಕರಾದ ಎಸ್. ಎಚ್. ರಡ್ಡಿ ಸಾವೂರ ಅವರು ತಿಳಿಸಿದರು.
ಪತ್ರಿಕಾ ಭವನದಲ್ಲಿ ವಿಶ್ವ ಧ್ಯಾನ ದಿನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪತ್ರಕರ್ತರಿಗೆ ಧ್ಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಮನಸ್ಸಂತೋಷ ಉಂಟಾಗುವುದರ ಮೂಲಕ ಮಾಡುವ ಕಾಯಕದಲ್ಲಿ ಅದು ಗುಣಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ನಿತ್ಯ ಧ್ಯಾನ ಮಾಡುವುದರಿಂದ ಮನಸ್ಸು, ಆತ್ಮಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಹಿರಿದಾದ ಸಾಧನೆ ಮಾಡಲು ಅದು ಸಹಕಾರಿಯಾಗುತ್ತದೆ ವಿಶೇಷವಾಗಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಧ್ಯಾನ ಎಂಬ ಸಹಯೋಗ ಅಗತ್ಯವಾಗಿದೆ ಎಂದರು.
ಒತ್ತಡದ ಬದುಕಿನಲ್ಲಿ ಪತ್ರಕರ್ತರಿಗೆ ನೆಮ್ಮದಿ ಗಗನಕುಸುಮವಾಗಿದೆ. ಎಷ್ಟೋ ಜನರು ಒತ್ತಡಕ್ಕೊಳಗಾಗಿ ಆರೋಗ್ಯ ಕೆಡಿಸಿಕೊಂಡವರು ಇದ್ದಾರೆ. ಕೆಲವರು ಅಸುನೀಗಿರುವುದು ನೋಡಿದಾಗ ಧ್ಯಾನದ ಮೂಲಕ ಇಂತಹ ಒತ್ತಡಗಳು, ಸಂಕಷ್ಟಗಳು ಮೆಟ್ಟಿ ನಿಲ್ಲಲು ಸಾಧ್ಯ ಎಂದು ನುಡಿದರು.
ಶಿಬಿರದಲ್ಲಿ ವೈಜನಾಥ ಹಿರೇಮಠ, ಸಿದ್ದಪ್ಪ ಲಿಂಗೇರಿ, ಅರುಣ ಕುಮಾರ, ಬಸವಂತ್ರಾಯ ಶಿವರಾಯ ಸೇರಿದಂತೆ ಇನ್ನಿತರರು ಇದ್ದರು.