ಶ್ರೀ ಗುರು ದತ್ತಾತ್ರೇಯರ ಪ್ರಥಮ ಅವತಾರ ಶ್ರೀ ಪಾದ ಶ್ರೀ ವಲ್ಲಭರು | ಕೃಷ್ಣ ನದಿ ತಟದ ದ್ವೀಪದಲ್ಲಿ 14 ವರ್ಷ ತಪಸ್ಸು | ಈ ಕ್ಷೇತ್ರದ ದರ್ಶನದಿಂದ ಸಕಲ ಇಷ್ಟಾರ್ಥ ಸಿದ್ಧಿ, ಜನ್ಮ ಪಾವನ
ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ, ಬ್ರಹ್ಮ, ವಿಷ್ಣು, ಮಹೇಶ್ವರ ಶ್ರೀಪಾದ ವಲ್ಲಭ ದಿಗಂಬರ…
ಅನೀಲ ಎನ್.ಬಸೂದೆ✍️: ರಾಯಚೂರು ಜಿಲ್ಲೆಯ ಗಡಿ (ದ್ವೀಪ) ದಲ್ಲಿರುವ ಶ್ರೀಕ್ಷೇತ್ರ ಕುರುವಾಪುರ ಶ್ರೀಪಾದ ಶ್ರೀ ವಲ್ಲಭರ ತಪೋ ಭೂಮಿಯಾಗಿದೆ.
ನಿಸರ್ಗ ಸೌಂದರ್ಯದ ರಮಣೀಯ ತಾಣ ಆಗಿದ್ದು, ಕಣ್ಣು ಹಾಯಿಸಿದ ಕಡೆಯೆಲ್ಲಾ ನೀರೆ… ನೀರು. ನದಿಯ ತಟದಲ್ಲಿ ಕಾಣುವ ವಿಶಾಲ ಗೋಪುರ… ಭಗ್ವ ಧ್ಜಜ ನೋಡಿದರೆ ದೇವಸ್ಥಾನ ಕಾಣುತ್ತದೆ. ಆದರೆ ಶ್ರೀ ಪಾದ ಶ್ರೀ ವಲ್ಲಭರ ದರ್ಶನ ಪಡೆಯಲು ದೋಣಿಯಲ್ಲಿ ಸಾಗಬೇಕು, ಸುಮಾರು 10 ನಿಮಿಷದಲ್ಲಿ ತಲುಪುತ್ತೇವೆ. ಆ ಕ್ಷೇತ್ರದಲ್ಲಿ ಕಾಲಿರಿಸಿದರೆ ಅದೇನೋ ಭಕ್ತಿಯ ಭಾವ ಅನುಭವಿಸಿದವರಿಗೇ ತಿಳಿಯುತ್ತೆ.
ಯಾದಗಿರಿ, ಗುರುಮಠಕಲ್ ಮಾರ್ಗವಾಗಿ ಕ್ಷೇತ್ರಕ್ಕೆ ತೆರಳ ಬೇಕಿದ್ದರೆ, ತೆಲಂಗಾಣದ ನಾರಾಯಣಪೇಟ, ಮಖ್ತಲ್ ನಿಂದ ಕರ್ನಿ ಮಾರ್ಗವಾಗಿ ಸುಮಾರು 20 ಕಿ.ಮೀ ಕ್ರಮಿಸಿದರೆ ವಲ್ಲಭಾ ಪುರ ತಲುಪುತ್ತೇವೆ. ಇಲ್ಲಿಗೆ ಸಾರಿಗೆ ವ್ಯವಸ್ಥೆ ತೀರಾ ವಿರಳ ಹಾಗಾಗಿ ಖಾಸಗಿ ವಾಹನ, ಇಲ್ಲವೇ ಬೈಕ್ ಮೇಲೆ ಸವಾರಿ ಮಾಡುವುದರಿಂದ ಸಮಯ ಉಳಿಸಬಹುದು.
ಗಡಿಯಲ್ಲಿರುವ ಪುಣ್ಯ ಕ್ಷೇತ್ರದ ಮಹಿಮೆ ಸುತ್ತಮುತ್ತಲಿನ ಜಿಲ್ಲೆಯ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಆದರೇ ಈ ಪಾವನ ಸನ್ನಿಧಿಗೆ ಕರ್ನಾಟಕಕ್ಕಿಂತ ಆಂಧ್ರಪ್ರದೇಶದ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರ ದಂಡು ಹೆಚ್ಚಾಗಿ ಕಾಣಸಿಗುತ್ತದೆ.
ಇಲ್ಲಿನ ಸ್ಥಳ ಮಹಿಮೆಯ ಕುರಿತು ಪ್ರಧಾನ ಅರ್ಚಕರಾದ ಮಂಜುನಾಥ ಭಟ್ ಪೂಜಾರ ಅವರು ಯಾದಗಿರಿಧ್ವನಿ.ಕಾಮ್ ನೊಂದಿಗಿನ ಸಂದರ್ಶನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ.
| ಶ್ರೀ ಪಾದ ರಾಜಂ ಶರಣಂ ಪ್ರಪದ್ಯೇ |
ಶ್ರೀ ಗುರು ದತ್ತಾತ್ರೇಯ ಜಗತ್ ಉದ್ಧಾರಕ್ಕೆ ಮೂರು ಅವತಾರ ಎತ್ತಿದ್ದಾರೆ. ದತ್ತ ಮಹಾರಾಜರ ಬಳಿಕ ಕಲಿಯುಗದಲ್ಲಿ ಎರಡು ಅವತಾರವಿದೆ. ಅದುವೇ ಶ್ರೀಪಾದ ಶ್ರೀ ವಲ್ಲಭ, ಎರಡನೇದು ನರಸಿಂಹ ಸರಸ್ವತಿ.
ಶ್ರೀಪಾದ ಶ್ರೀವಲ್ಲಭರು ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೀಠಾಪುರದಲ್ಲಿ ಆಪಾಳ ರಾಜಾ, ಸುಮತಿ ತಾಯಿ ದಂಪತಿಗಳಿಗೆ ಎಲ್ಲಾ ಅಂಗವಿಕಲ ಸಂತತಿ ಆಗುತ್ತಿರುತ್ತದೆ, ಹಾಗಾಗಿ ಉತ್ತಮ ಸಂತತಿ, ವಂಶ ಉದ್ಧಾರಕ್ಕಾಗಿ ದಂಪತಿಗಳು ನಿತ್ಯ ತ್ರಿರೂಪ ಸ್ವರೂಪಿ ಶ್ರೀ ಗುರು ದತ್ತಾತ್ರೇಯ ನಾಮ ಸ್ಮರಣೆ, ವ್ರತ, ಉಪವಾಸ ಸೇರಿ ಧಾರ್ಮಿಕ ಕಾರ್ಯದಲ್ಲಿ ಭಕ್ತಿ ಯಿಂದ ತೊಡಗಿಸಿಕೊಂಡಿದ್ದರು.
ಒಂದು ಬಾರಿ ಅಮಾವಾಸ್ಯೆ ಎಂದು ಶ್ರಾದ್ಧಾ ಕಾರ್ಯಕ್ರಮ ಬರುತ್ತದೆ. ಪೂಜಾ ತಯಾರಿ, ಅಡುಗೆ ಎಲ್ಲಾ ತಯಾರಿ ಆಗಿರು ತ್ತದೆ. ಇನ್ನೇನು ಪುರೋಹಿತರು ಬರಬೇಕಿದೆ. ಅವರನ್ನು ಕರೆಯಲು ಆಪಳ ರಾಜ ಮನೆ ಹೊರಗಡೆ ತೆರಳುತ್ತಾನೆ. ಸ್ವಾಗತ ಮಾಡಲು ಸುಮತಿ ಸಹ ಬಾಗಿಲಿಗೆ ನಿಂತಿರುತ್ತಾಳೆ, ಆ ಸಮಯ ಬಿಕ್ಷೆ ಬೇಡುತ್ತ ಬೇಡುತ್ತಾ ಮನೆಯ ಮುಂದೆ ಬರುತ್ತಾನೆ ಆಗ ಆ ತಾಯಿಗೆ ತಾವು ಶ್ರಾದ್ಧಾ ಕಾರ್ಯಕ್ಕೆ ಮಾಡಿದ ಅಡುಗೆ ನೀಡದರೆ ದೋಷ ತಗಲುತ್ತಾ? ಕೊಡದೇ ಕಳುಹಿಸಿದರೂ ಏನಾದರು ತೊಂದರೆ ಆಗಬಹುದಾ ಎನ್ನುವ ಚಿಂತೆ ಕಾಡತೊಡಗುತ್ತದೆ.
ಹಾಗೆ ಕಳಿಸಿದರೆ ಹೇಗೆ? ಎಂದು ಗುರುಗಳನ್ನು ಸ್ಮರಣೆ ಮಾಡಿ ಆ ಸ್ವರೂಪದಲ್ಲಿ ನೀನು ಬಂದಿರುವೆ ಎಂದು ಬಿಕ್ಷೆ ನೀಡುತ್ತಿರುವೆ ಸ್ವೀಕರಿಸಿ ಮನ್ನಿಸಿ ಆಶೀರ್ವದಿಸು, ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾಳೆ. ಬ್ರಾಹ್ಮಣ ಸ್ವರೂಪದಿಂದ ತ್ರಿಮೂರ್ತಿ ಸ್ವರೂಪದಲ್ಲಿ ದರ್ಶನ ನೀಡಿ ಆವಾಗ ಅನುಗ್ರಹವಾಗಿ ಭಕ್ತರ ಉದ್ಧಾರ, ಲೋಕ ಕಲ್ಯಾಣಕ್ಕಾಗಿ ಅವತಾರ ಆಗುತ್ತದೆ ಎಂದು ಹೇಳುತ್ತಾರೆ.
ಸುಮಾರು 800 ವರ್ಷಗಳ ಹಿಂದೆ ಭಾದ್ರಪದ ಶುದ್ಧ ಚತುರ್ಥಿ ಗಣಪತಿ ಹಬ್ಬದಂದು ಗುರುಗಳು ಆ ಕುಟುಂಬದಲ್ಲಿ ಜನಿಸಿದರು. ನಾಮ ಸಂಸ್ಕಾರ ಸೇರಿ ಎಲ್ಲಾ ಸಂಸ್ಕಾರ ಮಾಡಲಾಗುತ್ತದೆ. ತಮ್ಮ ಹಿಂದಿನ ಸಂತತಿ ವಿಕಲತೆ ಯಿಂದ ಕೂಡಿದ್ದು, ಈ ಮಗುವಿನ ಕುರಿತು ತಿಳಿಯಲು ಜ್ಯೋತಿಷ್ಯರ ಬಳಿ ಜನ್ಮ ಪತ್ರಿಕೆ ತಯಾರಿಗೆ ತೆರಳಿದಾಗ ಆ ಬಾಲಕ ಎಲ್ಲಿಲ್ಲಿ ತಿರುಗಾಡುತ್ತಾನೆಯೋ ಆ ಪ್ರದೇಶ ಮಂಗಳ ಮಯವಾಗುತ್ತದೆ ಎಂದು ಆ ಬಾಲಕನ ಹೆಸರು “ಶ್ರೀ ಪಾದ”ಹೆಸರು ನಾಮಕರಣ ಮಾಡಲಾಗುತ್ತದೆ.
ಬಳಿಕ ಉಪನಯನ ಆಗಿ ಪ್ರೌಢ ಅವಸ್ಥೆಗೆ ಬಂದಾಗ ತಮ್ಮ ಹಿಂದಿನವರು ಮದುವೆ ಆಗಿ ವಂಶ ಉದ್ಧಾರ ಮಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಮದುವೆ ಮಾಡಲು ಮುಂದಾಗಿ ಮಗನ ಎದುರು ಮನಸ್ಸಿನ ಮಾತು ಹಂಚಿಕೊಳ್ಳುತ್ತಾರೆ. ಆಗ ನಾನು ಅವತಾರ ಆಗಿದ್ದು ಅಮಾವಾಸ್ಯೆ ಎಂದು ಬಿಕ್ಷೆ ನೀಡಿದ್ದೀರಿ, ಆ ಪರಮಾತ್ಮ ಸ್ವರೂಪ ಎಂದು ಹೇಳಿದಾಗ ದೃಷ್ಟಾಂತವಾಗಿ ಆಗುತ್ತದೆ. ಅಂಗವಿಕಲರಿಗೆ ಆಶೀರ್ವಾದ ನೀಡಿದ ಮೇಲೆ ಎಲ್ಲರೂ ವಾಸಿಯಾಗುತ್ತಾರೆ. ಬಳಿಕ ತಂದೆ ತಾಯಿ ಅನುಮತಿ ಪಡೆದು ಶ್ರೀ ಪಾದರು ತೀರ್ಥ ಯಾತ್ರೆಗೆ ತೆರಳುತ್ತಾರೆ.
ಶ್ರೀಶೈಲ, ಗೋಕರ್ಣದ ಕಡೆ ತೆರಳುತ್ತಾರೆ. ಅಲ್ಲಿ ಏಕಾಂತ ಸಿಗಲ್ಲ. ಅವರ ಮಹಿಮೆ ಎಲ್ಲೆಡೆ ಹರಡಿ ಹೆಚ್ಚು ಭಕ್ತರು ಸೇರುತ್ತಿದ್ದರಿಂದ ತಪಸ್ಸು ಭಂಗವಾಗಬಹುದು ಎಂದು ಗುರುಗಳು ಏಕಾಂತವನ್ನು ಬಯಸಿ, ಕೃಷ್ಣ ತಟದ ದ್ವೀಪ ಕುರುವಾಪುರ ಏಕಾಂತ, ಸಾಧನೆಗೆ ಯೋಗ್ಯ ಎಂದು ಬಂದು 14 ವರ್ಷಗಳ ಕಾಲ ತಪಸ್ಸು ಮಾಡಿದ ಪುಣ್ಯ ಪೀಠವಾಗಿದೆ ಎಂದು ವಿವರಿಸಿದರು.
ದತ್ತ ಪರಂಪರೆಯಲ್ಲಿ ಪೀಠ, ಪಾದುಕೆವಿವೆ. ಈ ಕ್ಷೇತ್ರಕ್ಕೆ ನಿತ್ಯ ಒಂದು ಅಲಂಕಾರ ತ್ರಿಮೂರ್ತಿ ಸ್ವರೂಪ, ಶ್ರೀ ಪಾದ ಶ್ರೀ ವಲ್ಲಭ ರೂಪ ಇನ್ನೊಂದು ದಿನ ಗಾಣಗಾಪುರ ನರಸಿಂಹ ಸರಸ್ವತಿ ರೂಪದಲ್ಲಿ ಅಲಂಕಾರ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ.
ಒಮ್ಮೆಯಾದರು ಸುಕ್ಷೇತ್ರ ಶ್ರೀಪಾದ ಶ್ರೀ ವಲ್ಲಭ ಪೀಠ ಕುರುವಾಪುರಕ್ಕೆ ಭೇಟಿ ನೀಡಿ…
ಭಕ್ತರಿಗೆ ಉಳಿಯಲು ಅವಕಾಶ ವಿದೆ. ಪಾರಾಯಣ ಮಾಡುತ್ತಾ ರೆ. ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಹೆಚ್ಚಿನ ಭಕ್ತರು ಮಾಧ್ಯಮಗಳಿಂದ ತಿಳಿದು ಬರುತ್ತಿದ್ದಾರೆ. ಅಮಾವಾಸ್ಯೆ, ಹುಣ್ಣಿ ಮೆಗೆ ಜನ ಸಂದಣಿ ಹೆಚ್ಚಾಗಿರುತ್ತದೆ. ಇನ್ನು ಸಾಮಾನ್ಯ ದಿನಗಳಲ್ಲಿ ಸ್ವಲ್ಪ ಕಡಿಮೆ ಜನ ಇರುತ್ತಾರೆ.
ವರ್ಷದಲ್ಲಿ 4 ವಿಶೇಷ ಉತ್ಸವ ಮಾಘಮಾಸ, ಭಾದ್ರಪದ ಶುದ್ಧ ಚತುರ್ಥಿ, ಮಾರ್ಗಶಿರ ಮಾಸ ದತ್ತ ಜಯಂತಿ ಇಲ್ಲಿನ ಪ್ರಮುಖ ಕಾರ್ಯಕ್ರಮ ಗಳಾಗಿವೆ ಎಂದು ಪ್ರಧಾನ ಅರ್ಚಕರಾದ ವಾಸುದೇವ ಭಟ್ ಪೂಜಾರ ಅವರು ವಿವರಿಸಿದರು.