ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಸುರಪುರ ಮತ್ತು ಹುಣಸಗಿ ಭಾಗದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಬಾಲ್ಯ ವಿವಾಹ ತಡೆಗಟ್ಟಲು ತಂಡಗಳನ್ನು ರಚಿಸಿಕೊಂಡು ಜಾಗೃತಿ ಮೂಡಿಸುವ ಜೊತೆಗೆ ಬಾಲ್ಯ ವಿವಾಹ ಪತ್ತೆ ಹಚ್ಚುವ ಕಾರ್ಯ ಮಾಡುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಗ್ರಾಮ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿಯೂ ನಿರಂತರ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರ, ಶಿಕ್ಷಕರ ನೆರವನ್ನು ಪಡೆದು ಬಾಲ್ಯ ವಿವಾಹ ಗುರ್ತಿಸುವ ಮತ್ತು ಈ ಕುರಿತ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಅವರು ಸೂಚನೆ ನೀಡಿದರು.

ಬಾಲ್ಯ ವಿವಾಹ ತಡೆಗೆ ವರ್ಷಪೂರ್ಣ ಕ್ರಮಗಳು ಮತ್ತು ಕಾರ್ಯಗಳು ಆಗಬೇಕು. ಎಸ್. ಹೆಚ್. ಜಿ ಸಂಘಗಳು , ಅಂಗನ ವಾಡಿ ಕಾರ್ಯಕರ್ತೆಯರ ತಂಡಗಳನ್ನು ರಚಿಸಿ ಜಾಗೃತಿ ಮೂಡಿ ಸುವ ಕಾರ್ಯ ಮಾಡಬೇಕು. ಅದರಂತೆ ಕಳೆದ ಐದು ವರ್ಷಗಳ ಲ್ಲಿ ನಡೆದ ಬಾಲ್ಯ ವಿವಾಹಗಳ ಬಗ್ಗೆ ಮತ್ತು ಅಪ್ರಾಪ್ತ ಬಾಲಕಿಯ ರು ಗರ್ಭಿಣಿಯಾದ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು.

ಅವರ ಆರ್ಥಿಕ- ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಬೇಕು. ಹೆಣ್ಣು ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ, ಕಾನೂನು ಗಳ ಬಗ್ಗೆ ತಿಳಿಹೇಳಬೇಕು. ಶಾಲಾ ಮಕ್ಕಳ ಕ್ಲಬ್ ಮಾಡಿ ಅರಿವು ಮೂಡಿಸಬೇಕು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ, ಕಾಲೇಜು ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರು ಒಳ ಗೊಂಡ ಅಧಿಕಾರಿಗಳು ಬಾಲ್ಯ ವಿವಾಹ ತಡೆಗೆ, ಜಾಗೃತಿಗೆ, ಅಪ್ರಾಪ್ತ ಗರ್ಭಿಣಿಯರ ಪತ್ತೆಗೆ ಯೋಜನೆ ರೂಪಿಸಬೇಕು ಎಂದು ಸೂಚನೆ ನೀಡಿದರು.

ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಾಲ್ಯ ವಿವಾಹ ತಡೆಯು ವುದು ಅತಿ ಮುಖ್ಯವಾಗಿದ್ದು, ಶಿಕ್ಷಣದ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಅವಶ್ಯಕತೆ ಇದೆ. ಅದರಂತೆ ಪ್ರತಿ ಗ್ರಾಮ, ಗ್ರಾಮ ಪಂಚಾಯತ್ ಮತ್ತು ತಾಲೂಕ ಮಟ್ಟದಲ್ಲಿ ತಂಡಗಳನ್ನು ರಚಿಸಿಕೊಂಡು, ಬಾಲ್ಯ ವಿವಾಹ ದುಷ್ಪರಿಣಾಮಗಳ ಬಗ್ಗೆ ಹಾಗೂ ಕಾನೂನು ಗಳ ಬಗ್ಗೆ ಅರಿವು ಮೂಡಿಸಬೇಕು. ಉತ್ತಮ ಭವಿಷ್ಯದ ಬಗ್ಗೆ ತಿಳಿ ಹೇಳಬೇಕು ಎಂದು ಸೂಚಿಸಿದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನಿರಂತರ ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈಗಾಗಲೇ ಬಾಲ್ಯ ವಿವಾಹ ತಡೆದಿರುವವರ ಸ್ಥಿತಿಗತಿಗಳ ಬಗ್ಗೆ ನಿಗಾವಹಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವೈದ್ಯಕೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಶಾ ಕಾರ್ಯಕರ್ತೆಯರಿಗೂ ತರಬೇತಿಗೊಳಿಸಿ ಅಪ್ರಾಪ್ತ ಗರ್ಭಿಣಿಯರನ್ನು ಗುರುತಿಸಬೇಕು. ಕನ್ಫರ್ಮ್ಡ ನೈಜ ಪ್ರಕರಣಗಳನ್ನು ಆರ್. ಸಿ ಹೆಚ್. ಪೋರ್ಟಲ್ದಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ದಮನಿತ ಮಹಿಳೆಯರ ಜಿಲ್ಲಾ ಮಟ್ಟದ ಸಭೆ, ಟ್ರಾನ್ಸ್ ಜೆಂಡರ್ ರವರ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹನುಮಂತ ರಾಯ ಕರಡಿ, ಡಿವೈಎಸ್ಪಿ ಅರುಣಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಪ್ರೇಮ ಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!