ಯಾದಗಿರಿ: ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದೆ. ಇದರ ನಿರ್ಮೂಲನೆಗೆ ಪ್ರಾಮಾಣಿಕತೆ ಹಾಗೂ ನಿಷ್ಠೆ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ರೇಖಾ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್,ಪೋಲಿಸ್ ಇಲಾಖೆ, ಕರ್ನಾಟಕ ಲೋಕಾಯುಕ್ತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹವನ್ನು ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಆಸೆಯೇ ದುಃಖಕ್ಕೆ ಮೂಲ ಅದರಂತೆ ದುರಾಸೆಯೆ ಭ್ರಷ್ಟಾಚಾ ರಕ್ಕೆ ಮೂಲ ಎಂದ ಅವರು ಕೌಟುಂಬಿಕ ಆಸೆ,ಆಕಾಂಕ್ಷೆಗಳ ಪೂರೈಕೆ ಗೆ ಸೂಕ್ತ ಉದ್ಯೋಗ,ವೇತನ ಇದ್ದಲ್ಲಿ ಭ್ರಷ್ಟಾಚಾರದ ನಿಯಂತ್ರಣಕ್ಕೆ ಅನುಕೂಲ ಎಂದು ಹೇಳಿದರು.
ದೇಶಭಕ್ತಿ ಇದ್ದಲ್ಲಿ ಭ್ರಷ್ಟಾಚಾರದಿಂದ ದೂರ ಉಳಿಯಲು ಸಾಧ್ಯ. ನೆರೆ ಹೊರೆಯವರ ಜೀವನ ಶೈಲಿಗೆ ಮಾರು ಹೋಗದೆ ಕೌಟುಂಬಿಕ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಭ್ರಷ್ಟಾಚಾರದಿಂದ ದೂರ ಉಳಿದು, ಜೀವನದಲ್ಲಿ ಎಲ್ಲರೂ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಈ ಭಾಗದಲ್ಲಿ ಶೈಕ್ಷಣಿಕವಾಗಿ ಮಕ್ಕಳು ಮುಂದೆ ಬರಲು ನುರಿತ ಶಿಕ್ಷಕರು ಇರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಸ್ಪರ್ಧಾತ್ಮಕವಾಗಿ ಅವರನ್ನು ಬೆಳೆಸಿ ಅವರ ಭವಿಷ್ಯ ರೂಪಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲ ಇಲಾಖೆಗಳು ಕೈ ಜೋಡಿಸುವಂತೆ ಅವರು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಅವರು ಮಾತನಾಡಿ, ನಮ್ಮನ್ನು ನಾವು ಪ್ರಾಮಾಣಿಕವಾಗಿ ಸರಿಪಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ.ಅಧಿಕಾರಿಗಳು, ಆಡಳಿತವರ್ಗದವರು ಪ್ರಾಮಾಣಿಕ, ಪಾರದರ್ಶಕ ರಾದಲ್ಲಿ ಭ್ರಷ್ಟಾಚಾರ ತಡೆಯಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಅಧಿಕಾರಿ,ಸಿಬ್ಬಂದಿಗಳು ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಗಳ ಬಗ್ಗೆ ಅರಿವು ಹೊಂದಬೇಕು.ಇಂತಹ ಕಾರ್ಯಾಗಾರಗಳು ಹೆಚ್ಚು ಉಪಯುಕ್ತವಾಗಿವೆ ಎಂದು ಹೇಳಿದರು.
ಲೋಕಾಯುಕ್ತ ಎಸ್. ಪಿ. ಉಮೇಶ್.ಬಿ.ಕೆ ಅವರು ಮಾತನಾಡಿ, ಸರ್ಕಾರದಿಂದ ಏಳನೇ ವೇತನ ಆಯೋಗ ಜಾರಿಯಾದ ನಂತರ ಸರ್ಕಾರಿ ನೌಕರರಿಗೆ ತೃಪ್ತಿಕರವಾದ ವೇತನ ದೊರೆಯುತ್ತಿದೆ.
ಉತ್ತಮವಾಗಿ ಸಾರ್ವಜನಿಕ ಸೇವೆ ಮಾಡುವ ಮೂಲಕ ಕುಟುಂಬ,ಸಮಾಜ, ರಾಜ್ಯದಲ್ಲಿ ತಮ್ಮ ಕೀರ್ತಿ ಹೆಚ್ಚಿಸಿಕೊಳ್ಳ ಬೇಕು ಎಂದು ಹೇಳಿ ಲೋಕಾಯುಕ್ತ ಕಾಯ್ದೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಇರುವ ಅಧಿಕಾರಿಗಳು ಜನರಿಗೆ ಸರ್ಕಾರದ ಸೌಲಭ್ಯಗಳನ್ನು ವಿಳಂಬವಿಲ್ಲದೆ ಸಕಾಲಕ್ಕೆ ದೊರಕಿಸಬೇಕು. ಜನರ ಸೇವೆಗೆ ಬದ್ದರಾಗಬೇಕು. ಜನಸ್ನೇಹಿ ಯಾಗಿ, ಕಾನೂನುಗಳನ್ವಯ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿ ನರಸಿಂಗರಾವ್ ಕುಲಕರ್ಣಿ ಹಾಗೂ ಲೋಕಾಯುಕ್ತ ವಿಶೇಷ ಅಭಿಯೋಜಕ ಹಿರಿಯ ನ್ಯಾಯವಾದಿ ಪಿ.ಶಿವರಾಜ್ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗಳ ಬಗ್ಗೆ ವಿವರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೀಶ ,ಬಾರ್ ಅಸೋಸಿಯೇಷನ್ ಅಧ್ಯಕ್ಷ. ಸಿ.ಎಸ್.ಮಾಲಿಪಾಟೀಲ್ ಉಪಸ್ಥಿತರಿದ್ದರು. ನ್ಯಾಯವಾದಿ ನಿರಂಜನ್ ಯರಗೋಳ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.