ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವರದಿ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಮುಂದಾಗಲಿ
ಯಾದಗಿರಿ: ಕಲ್ಯಾಣ ಕರ್ನಾಟಕ ಹಿಂದುಳಿಯಲು ಗುಣಮಟ್ಟದ ಶಿಕ್ಷಣದ ಕೊರತೆ ಹಾಗೂ ಮೂಲಸೌಕರ್ಯಗಳ ಕೊರತೆ ಕಾರಣವಾಗಿದೆ. ಇದನ್ನು ಜನಪ್ರತಿನಿಧಿ, ಅಧಿಕಾರಿಗಳು ಅರಿತು ಜವಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥವಾಗಿ ಈ ಭಾಗದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ ಹೇಳಿದರು.
ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶೇಷವಾಗಿ ನಮ್ಮ ಭಾಗ ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣಗಳನ್ನು ಕಂಡುಕೊಳ್ಳದೇ ಸಮಸ್ಯೆ ಪರಿಹರಿಸಲು ಯತ್ನಿಸದೇ ಇರುವ ರಾಜಕೀಯ ಇಚ್ಛಾಶಕ್ತಿ ಕೊರತೆ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಕನಿಷ್ಟ ಯಾದಗಿರಿ ಜಿಲ್ಲೆಗೆ ಒಂದು ಕೌಶಲ್ಯಾಭಿವೃದ್ದಿ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಕಾಲೇಜುಗಳು ನೀಡುವಂತೆ ಸರ್ಕಾರದ ಮೇಲೆ ಈ ಭಾಗದ ಜನಪ್ರತಿನಿಧಿಗಳು ಒತ್ತಡ ಹೇರಬೇಕು ಎಂದು ಆಗ್ರಹಪಡಿಸಿದರು.
ಪ್ರಾದೇಶಿಕ ಅಸಮತೋಲನ ಕುರಿತು ಡಾ. ಡಿ.ಎಂ. ನಂಜುಂಡಪ್ಪ ಅವರು ನೀಡಿದ ವರದಿಯನ್ವಯ ಕಲ್ಯಾಣ ಭಾಗಕ್ಕೆ ಜಿಲ್ಲೆಗೊಂದು ವಿವಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ ಈ ಕುರಿತು ಯಾವುದೇ ಒಬ್ಬ ವ್ಯಕ್ತಿಯೂ ಚಕಾರ ಎತ್ತದೇ ಇರುವುದು ನಮ್ಮ ಭಾಗದ ದುರ್ದೈವವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಶೈಕ್ಷಣಿಕ ಹಿಂದುಳಿಯುವಿಕೆಗೆ ಶಿಕ್ಷಕರ ಕೊರತೆ ಕಾರಣವಾಗಿದೆ, ವಸತಿ ನಿಲಯಗಳಿದ್ದರೂ ಅಲ್ಲಿ ಮೂಲಸೌಕರ್ಯಗಳಿಲ್ಲ, ಸರಿಯಾದ ಆಹಾರವನ್ನು ವಿದ್ಯಾರ್ಥಿ ಗಳಿಗೆ ನೀಡುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳೇ ಇಲ್ಲ, ಯಾದಗಿರಿ ಪದವಿ ಕಾಲೇಜಿನಲ್ಲಿ ಪಿಯು ಕಾಲೇಜು ಸೇರಿ ದಂತೆ ವಿವಿಧ ಕಾಲೇಜುಗಳಲ್ಲಿಯೇ ವಿದ್ಯಾರ್ಥಿ ಗಳಿಗೆ ಅಲ್ಲದೇ ವಿದ್ಯಾರ್ಥಿನಿಯರಿಗೆಯೂ ಶೌಚಾಲಯ ವಿಲ್ಲ, ಕನಿಷ್ಟ ಶುದ್ಧ ಕುಡಿವ ನೀರು ಸವಲತ್ತೂ ಸಹ ಇಲ್ಲ ಎಂಬುದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು, ಇಲ್ಲಿನ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಲ್ಲದೇ ವಿದ್ಯಾರ್ಥಿಗಳೂ ಸಹ ಸಂಘಟಿತರಾಗಿ ಸರ್ಕಾರ, ಪ್ರತಿನಿಧಿಗಳ ಮೇಲೆ ಒತ್ತಡ ಹೇರಲು ಸಜ್ಜಾಗಬೇಕು ಎಂದು ಕರೆ ನೀಡಿದರು.
ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಜ ಹೊನಗೇರಾ ಮಾತನಾಡಿ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಶಾಲೆ ಕಾಲೇಜುಗಳು, ಹಾಸ್ಟೆಲ್ ಗಳಲ್ಲಿನ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ರೂಪಿಸಲಾಗುವುದು ಎಂದು ಪ್ರಕಟಿಸಿದರು.
ಸಭೆಯಲ್ಲಿ ಸಾಹೇಬಗೌಡ ನಾಯಕ, ಸಿದ್ದರಡ್ಡಿಗೌಡ ಮುನಗಾಲ, ಸುರೇಶ ಬೆಳಗುಂದಿ, ಸೈದಪ್ಪ ಗೌಡಗೇರಾ, ಶರಣು ಅಂಬುನಾಯಕ, ಕುತುಬ್, ಬಸ್ಸು, ಲಕ್ಷö್ಮಣ ಅಂಬರೇಶ, ಯಲ್ಲು ಚಾಮನಳ್ಳಿ ಇನ್ನಿತರರು ಇದ್ದರು.
ಜಿಲ್ಲಾ ವಿದ್ಯಾರ್ಥಿ ಘಟಕ ನೂತನ ಪದಾಧಿಕಾರಿಗಳು: ಶರಣು ಕೆ. ಬಂದಳ್ಳಿ (ಪ್ರ.ಕಾ), ಚನ್ನು ಬಿ. ಮೇದಾ, ಸದ್ದಾಂ ಹುಸೇನ್ ಇಟಗಿ (ಉಪಾಧ್ಯಕ್ಷ), ಕರುಣೇಶ ಸ್ವಾಮಿ ಚಾಮನಳ್ಳಿ, ಮಂಜುನಾಥ ನಾಯ್ಕೋಡಿ (ಸಂ.ಕಾ.), ಮಲ್ಲು ಬಡಿಗೇರ, ಸಿದ್ದು ರಾಮಸಮುದ್ರ, ರಜಾಕ್ ಬಸಂತಪುರ (ಸಹ ಕಾ.), ನಾಗರಾಜ ಶೇಟ್ಟಿಗೇರಾ, ಹಣಮಂತ ಹೋರುಂಚಾ (ಪ್ರ.ಸಂ), ರಾಕೇಶ ಶೆಟ್ಟಿ (ಖಜಾಂಚಿ), ಬಸ್ಸು ಎನ್. ನಾಯಕ, ವಂಶಿ ಬೆಳಗೇರಾ (ಸಂಚಾಲಕರು), ಸುರೇಶ ಗಣಪೂರ (ಸಾಮಾಜಿಕ ಜಾಲತಾಣ ಸಂಚಾಲಕ), ಮೌನೇಶ ಕುಂಬಾರ (ನಗರಾಧ್ಯಕ್ಷ) ಆಯ್ಕೆ ಮಾಡಲಾಯಿತು.