ಯಾದಗಿರಿ: ವೀರವನಿತೆ ಒನಕೆ ಓಬವ್ವ ಅವರು ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆ ಮೂಲಕ ಚಿತ್ರದುರ್ಗದ ಕೋಟೆ ರಕ್ಷಣೆಗೆ ತೋರಿದ ಧೈರ್ಯ- ಸಾಹಸ ಸ್ಮರಣೀಯವಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ “ಒನಕೆ ಓಬವ್ವ ಜಯಂತಿ “ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಗೃಹಿಣಿ ಎನಿಸಿಕೊಂಡಿದ್ದ ಒನಕೆ ಓಬವ್ವ, ಇತಿಹಾಸದ ಪುಟಗಳಲ್ಲಿ ಆವರಿಸಿಕೊಂಡಿದ್ದೆ ರೋಮಾಂಚಕ ಕಥನ. ಚಲವಾದಿ ಸಮುದಾಯದ ಓಬವ್ವ, ಸ್ವಾಮಿ ನಿಷ್ಠೆ, ಸಮಯ ಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ.
ಚಿತ್ರದುರ್ಗದ ಕೋಟೆಯ ಮುತ್ತಿಗೆಗೆ ಯತ್ನಿಸಿದ ಹೈದರ್-ಅಲಿ ಕುತಂತ್ರವನ್ನು ವಿಫಲಗೊಳಿಸಿ ಕೋಟೆ ಮತ್ತು ಜನತೆಯನ್ನು ಅಪಾಯದಿಂದ ಪಾರು ಮಾಡಿದ ವೀರವನಿತೆ ಓಬವ್ವ ಎಂದು ಹೇಳಿದರು.
ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಮದ್ದ ಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರ ವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಸಾಲಿನಲ್ಲಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಂಶುಪಾಲ ಸರ್ವೋದಯ ಎಸ್. ಎಸ್, ಗುಡಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಚಿನ್ನಪ್ಪ, ಚಿನ್ನಮ್ಮ ದಂಪತಿಯ ಸುಪುತ್ರಿಯಾಗಿ ಬಳ್ಳಾರಿ ಜಿಲ್ಲೆಯ ಕೊಡ್ಲಿಗಿ ತಾಲೂಕಿನ ಗುಡ್ಡೆ ಕೋಟೆಯಲ್ಲಿ ಜನಿಸಿದಳು.
ಓಬವ್ವಗೆ ಕಂದೂರಪ್ಪ ಮತ್ತು ತಿಪ್ಪಣ್ಣ ಎಂಬ ಅಣ್ಣಂದಿರು ಕಂದೂರಪ್ಪ ನಿಡುಗಲ್ಲು ಸಂಸ್ಥಾನದ ದೊರೆಗಳಲ್ಲಿ ಕಾವಲಗಾರನಾಗಿ ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿ ವೀರಮರಣ ಹೊಂದಿದ್ದರು. ಇಂತಹ ಆದರ್ಶ ಕುಟುಂಬ ದಲ್ಲಿ ಬೆಳೆದವಳು ಒಬ್ಬವ್ವಳ ಪತಿ ಕಹಳೆ ಮದ್ದ ಹನುಮಪ್ಪ ಕಿಂಚಿತ್ತೂ ಲೋಪ ಮಾಡಿದವನಲ್ಲ.
ಅವನ ವ್ಯಕ್ತಿತ್ವಕ್ಕೆ ಸರಿಯೇ ಸಮಾನವಾದ ಸಂಗಾತಿ ಓಬವ್ವ, ಚಿತ್ರದುರ್ಗದ ರಾಜಾವೀರ ಮದಕರಿ ನಾಯಕರಲ್ಲಿ ಆಪ್ತ ಸೇವೆಕನಾಗಿ ಸೇವೆ ಸಲ್ಲಿಸುತ್ತಿದ್ದ ಮದ್ದ ಹನುಮಪ್ಪನ ಸತಿಯಾಗಿ ಬಾಳಿ ಬೆಳಗಿದ ಒಬ್ಬವ್ವ ಕೇವಲ ಓಬವ್ವ ಮಾತೆಯ ಸಾಹಸ ಕಾರ್ಯಕ್ಕೆ ಮದಕರಿ ನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆ ಕಟ್ಟಿಸಿ ಅದರ ಬಾಗಿಲಿಗೆ “ಒನಕೆ ಕಿಂಡಿ ಬಾಗಿಲು” ಎಂದು ಹೆಸರಿಟ್ಟಿದ್ದು, ಒಬ್ಬವ್ವಳ ಅಪ್ರತಿಮ ಸೇವೆಯ ಪ್ರತೀಕವಾಗಿದೆ.
ಓಬವ್ವ ಮಾತೆಯ ಅಪೇಕ್ಷೆಯಂತೆ ಕುಲದೇವತೆಯಾಗಿಸಿ ಅಗಸನಕಲ್ಲು ಗ್ರಾಮವನ್ನು ಚಲವಾದಿ ಸಮುದಾಯಕ್ಕೆ ಜಹಾಗೀರಿಯಾಗಿ ನೀಡಿ, ಓಬವ್ವ ಮರಣ ಹೊಂದಿದಾಗ ದೊರೆಗಳೇ ಬಂದು ಸಂತಾಪ ಸೂಚಿಸಿ ರಾಜ ಮರ್ಯಾದೆಯೊಡನೆ ದುರ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ತಣ್ಣೀರು ಚಿಲುಮೆಯ ಪೂರ್ವಕ್ಕೆ ಸಮಾಧಿ ಮಾಡಿಸಿದ್ದು, ಚಿತ್ರದುರ್ಗ ದೊರೆಗಳ ದಕ್ಷತೆಗೆ, ಔದಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಓಬವ್ವ ತ್ರಿಕಾಲಗಳಿಗೂ ಪ್ರಭಾವಿಸುವಂತಹ ವ್ಯಕ್ತಿತ್ವ ಸಂಪಾದಿಸಿದ್ದರಿಂದಲೇ ಸಾಂಸ್ಕೃತಿಕ ನಾಯಕಿ ಎಂಬ ಅಭಿದಾನಕ್ಕೆ ಅರ್ಹಳಾಗಿದ್ದಾಳೆ. ಆಕೆಯ ಸೌಜನ್ಯ, ವಿವೇಕ ವಿವೇಚನೆ, ವಿಚಾರಗಳು ಸದಾಸ್ಮರಣೀಯ. ಚಿತ್ರದುರ್ಗ ನಗರದ ಹೊಳಲ್ಕೆರ್ ರಸ್ತೆಯ ಅಗಸನ ಕಲ್ಲು ಚಲವಾದಿಗಳು ವಾಸಿಸುತ್ತಿರುವ ಸ್ಥಳದಲ್ಲಿ ಓಬವ್ವ ಮಾತೆಯ ದೇವಾಲಯ ನಿರ್ಮಾಣವಾಗಿದೆ. ನಿತ್ಯ ಪೂಜೆ ನಡೆಯುತ್ತಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಯಾದಗಿರಿ ತಹಸೀಲ್ದಾರ್ ಸುರೇಶ್ ಅಂಕಲಗಿ, ವೀರ ವನಿತೆ ಒನಕೆ ಒಬ್ಬವ ಸಮಿತಿ ಜಿಲ್ಲಾಧ್ಯಕ್ಷ ಗೋಪಾಲ್ ತಳಿಗೇರಿ, ಶಿವಕುಮಾರ್ ಬಂದಳ್ಳಿ. ಚಂದ್ರಕಾಂತ್ ಮುನಿಯಪ್ಪ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾ ದೇವಿ ಮಠಪತಿ ಸೇರಿದಂತೆ ಅನೇಕ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಾನಯೋಗಿ ಪ.ಪಂಚಾಕ್ಷರಿ ಸಂಗೀತ ಪಾಠ ಶಾಲೆಯ ರೇಣುಕ ಎಂ ಶಳಗಿ, ತಬಲ ಮಹಾಂತೇಶ್ ಶಹಪುರಕರ, ವಿನಯ್ ಕುಮಾರ್ ಶಳಗಿ, ಶ್ರೇಯಾ ಪಿ.ಬಿ, ಸುಭಧಾ ಪುರಣಕರ, ಚಿನ್ಮಯ್ ರೆಡ್ಡಿ, ಮೈತ್ರಿ ಬಡಿಗೇರ್ ಪ್ರಾರ್ಥಿಸಿ, ಸಂಗೀತ ಕಾರ್ಯಕ್ರಮವನ್ನು ನೆರವೆರಿಸಿಕೊಟ್ಟರು.