ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ | ಸಪ್ತಗಿರಿ ಆಸ್ಪತ್ರೆ ವೈದ್ಯರಿಂದ ತಪಾಸಣೆ
ಗುರುಮಠಕಲ್: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ರಘುನಾಥ ರೆಡ್ಡಿ ಗೋವಿನಜೋಳ, ಕರವೇ ತಾಲೂಕು ಅಧ್ಯಕ್ಷ ಶರಣ ಬಸಪ್ಪ ಎಲ್ಹೇರಿ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶಿಬಿರ ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ಶರಣ ಬಸಪ್ಪ ಎಲ್ಹೇರಿ ಮಾತನಾಡಿ, ಅನಾರೋಗ್ಯಕ್ಕೆ ತುತ್ತಾದ ಜನರಿಗೆ ಸರಿಯಾದ ಮಾರ್ಗದರ್ಶನ ವಿಲ್ಲದೇ ಸೂಕ್ತ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶಿಬಿರ ಆಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಮಾರಕ ಕಾಯಿಲೆಗಳು ಬರುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯವಾಗಾದೆ ಎಂದರು.
ಇಂದಿನ ದಿನಗಳಲ್ಲಿ ಮನೆ ಮಂದಿ ಇಲ್ಲಾ ದುಡಿದರೂ ಸಾಲದ ಕಾಲವಿದೆ. ಅಂತಹದ್ದರಲ್ಲಿ ಬಡ ಜನರಿಗೆ ಆರೋಗ್ಯ ಸಮಸ್ಯೆ ಆದರೇ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂತಹ ಶಿಬಿರಗಳ ಉಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಸಪ್ತಗಿರಿ ಆಸ್ಪತ್ರೆಯ ಡಾ. ನಿರಂಜನ ಮಾತನಾಡಿ, ತಪಾಸಣೆ ಮಾಡಿ, ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ಮುಂದಿನ ಚಿಕಿತ್ಸೆಗೆ ಕಳಿಸಲಾಗುವುದು ಎಂದರು.
ಸಂತೋಷ ನೀರೆಟಿ ಮಾತನಾಡಿ, ಆರೋಗ್ಯದ ಕುರಿತು ಹೆಚ್ಚು ಜಾಗೃತಿಯಿಲ್ಲ. ಬಡ ಜನರು ಇರುವುದರಿಂದ ಆಸ್ಪತ್ರೆಯವರೇ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಮೈತ್ರಿ ಮಾತನಾಡಿ, ಈ ಭಾಗದ ಜನರಿಗೆ ಶಿಬಿರ ಉಪಯುಕ್ತವಾಗಿದೆ. ಆಸ್ಪತ್ರೆಯಲ್ಲಿ ಶಿಬಿರ ಹಮ್ಮಿಕೊಂಡಿದ್ದಕ್ಕೆ ಆಯೋಜಕರು ಮತ್ತು ಆಸ್ಪತ್ರೆ ಅವರಿಗೆ ಧನ್ಯವಾದ ಹೇಳಿದರು.
ಹೃದ್ರೋಗ ತಜ್ಞ ಡಾ. ಮಲ್ಲಿಕಾರ್ಜುನ, ಕ್ಯಾನ್ಸರ್ ತಜ್ಞ ಡಾ. ಶ್ರವಣ, ಡಾ. ದಿನೇಶ ಕಿಡ್ನಿ ತಜ್ಞ, ನ್ಯೂರೊ ತಜ್ಞ ಡಾ. ಶರತ, ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಕೇಶವುಲು ಗೌಡ, ಪ್ರವೀಣ ಗೋವಿನಜೋಳ, ಗೋಪಾಲಕೃಷ್ಣ ಮೇದಾ, ರಿಯಾಜ್ ಅಹ್ಮದ್ ಇದ್ದರು.