ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ: ಅಸಮಾಧಾನ
ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಂಗಡಿ ಸೂಗೂರ್, ಶಿವಪುರ, ಗುಡ್ಲೂರ್, ಗ್ರಾಮಗಳು ಈವರೆಗೂ ಅಭಿವೃದ್ಧಿಯಿಂದ ವಂಚಿತವಾಗಿದ್ದು ಜಿಲ್ಲಾಡಳಿತ ಇತ್ತು ಗಮನಹರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ.ಮುದ್ನಾಳ ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ಇರುವ ಪ್ರಮುಖ ರಸ್ತೆಯುದ್ದಕ್ಕೂ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿಯಿದ್ದು, ಗ್ರಾಮಗಳಲ್ಲಿ ತಮಟೆ ಚಳುವಳಿ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಹಳ್ಳ ಹಿಡಿದಿದೆ. ಶಾಲೆಗಳು ಮೂಲಭೂತ ಸೌಕರ್ಯಗಳಿಂದ ದೂರ ಉಳಿದಿವೆ. ಕಾಂಪೌಂಡ್, ಚರಂಡಿ, ಶುಧ್ಧ ಕುಡಿಯುವ ನೀರು, ಹಾಗೂ ಸಿಸಿ ರಸ್ತೆ ಇರದ ಕಾರಣದಿಂದಾಗಿ ಈ ಎಲ್ಲ ಗ್ರಾಮಗಳಲ್ಲಿ ಶಾಲೆಗಳು ಶೀಥಿಲಗೊಂಡಿರುವುದರಿಂದ ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ ಮಾಡುವ ಪರಿಸ್ಥಿತಿ ಬಂದೊದಗಿದೆ.
ಗ್ರಾಮಸ್ಥರು ಸಂಬಂಧಪಟ್ಟಿವರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೇ ಗ್ರಾಮಸ್ಥರು ಗಲಿಜು ಗೊಜ್ಜಲಿನಲ್ಲಿಯೇ ತಿರುಗಾಡುವ ವ್ಯವಸ್ಥೆ ಸೃಷ್ಟಿಯಾಗಿದ್ದರೂ ಕ್ಯಾರೆ ಎನ್ನದೇ ಇದ್ದುದರಿಂದ ತಮ್ಮ ಗಮನಕ್ಕೆ ತಂದಿದ್ದರಿಂದ ಇಂದು ಬೆಳಗ್ಗೆ ಗ್ರಾಮಗಳಿಗೆ ಭೇಟಿ ನೀಡಿ ನೋಡಿದಾಗ ಅಚ್ಚರಿಯಾಯಿತು ಎಂದು ಅವರು ಹೇಳಿದ್ದಾರೆ.
ಚರಂಡಿ ನೀರು ರಸ್ತೆ ಮೇಲೆ ಹರಿದು ಗಬ್ಬೆದ್ದು ಗ್ರಾಮವೇ ನಾರುವಂತಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಸೊಳ್ಳೆಗಳ ಹಾವಳಿಗೆ ಜನ ಜಾನುವಾರುಗಳು ತತ್ತರಿಸಿವೆ ಎಂದು ಅವರು ದೂರಿದರು.
ಜನರು ದೇವಸ್ಥಾನಕ್ಕೆ ಹೋಗಲು ಶುಚೀತರಾಗಿ ಹೋಗುತ್ತಾರೆ. ಆದರೆ, ಈ ಗ್ರಾಮದಲ್ಲಿ ಊರ ಹೊಲಸಿನ ಮದ್ಯೆಯೇ ದಾಟಿಕೊಂಡು ದೇವಸ್ಥಾನಕ್ಕೆ ಹೋಗುವ ಪರಿಸ್ಥಿತಿ ಇದೆ. ಗ್ರಾಮದಿಂದ ಯಾರೋಬ್ಬರು ಹೊರಗೆ ಹೋಗಬೇಕೆಂದರೂ ಇದೇ ರಸ್ತೆಯಲ್ಲಿಯೇ ತೆರಳಬೇಕು.
ಎತ್ತುಬಂಡಿ, ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುವಾಗಿ ಹೊಲಸಿನಲ್ಲಿ ಬಿದ್ದು ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಶುದ್ಧ ಕುಡಿವ ನೀರು ತರಬೇಕೆಂದರೂ ಹೊಲಸಿನಲ್ಲಿಯೇ ಸಾಗಬೇಕಿದೆ. ಇಷ್ಟು ವರ್ಷ ಆಳಿದವರು ಏನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೃಷ್ಯವನ್ನು ಡಿಸಿ, ಸಿಇಒ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರಾಜು, ಶರಣು, ಅಯ್ಯಣ್ಣ, ದಾವೂದ್ ಪಾಟೀಲ್, ಸೈದಪ್ಪ, ಬನ್ನಯ್ಯ ಸ್ವಾಮಿ, ಸಾಬಣ್ಣ ಪೂಜಾರಿ, ನಾಗರಾಜ್, ಭಾಷಾ ಪಾಟೀಲ್, ಸೂಗುರ್, ರವಿಕುಮಾರ್, ಬಿಮಣ್ಣ ದೋರಿ, ಬಸವರಾಜ್, ಶರಣಪ್ಪ, ಮರೆಪ್ಪ, ಬಸವಂತ, ಮಲ್ಲಿಕಾರ್ಜುನ್ ಗೌಡ, ಶಿವಪುರ ಗ್ರಾಮ, ಶಿವುಕುಮಾರ, ಪ್ರಭು, ಹಮತೆಪ್ಪ, ಮರೆಪ್ಪ, ಬಸಯ್ಯ ಸ್ವಾಮಿ, ಸೈದಪ್ಪ, ದೇವು, ಖಾಜಾ ಪಟೇಲ್, ಇಸ್ಮಾಯಿಲ್ ಪಟೆಲ್, ಸೈಯದ್ ಅಲಿ ಸಾಹುಕಾರ್, ಫಜಲ್ ಪಟೇಲ್ ಇದ್ದರು.