ಶಶಿ ಚಾರಿಟೇಬಲ್ ಟ್ರಸ್ಟ್ ಸಹಯೋಗ |ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪಣ
ಯಾದಗಿರಿ: ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ನಗರಸಭೆಯೊಂದಿಗೆ ನಾಗರಿಕರೂ ಕೈಜೋಡಿಸಬೇಕೆಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ ಮನವಿ ಮಾಡಿದರು.
ನಗರಸಭೆ ಆವರಣದಲ್ಲಿ ಶಶಿ ಚಾರಿಟೇಬಲ್ ಟ್ರಸ್ಟ್ ಹಾಗೂ ನಗರಸಭೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ಯಾದಗಿರಿ ಜಾಗೃತಿ ಅಭಿಯಾನದ ಅಂಗವಾಗಿ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಎಂಬ ವಿಷವನ್ನು ದೂರ ಮಾಡಲು ಪ್ರತಿಯೊಬ್ಬ ನಾಗರಿಕರು ಜಾಗೃತಿ ಹೊಂದಿ ಕೈಜೋಡಿಸಿದರೆ ಮಾತ್ರ ನಗರ ವಿಷ ಮುಕ್ತವಾಗಲು ಸಾಧ್ಯ ಎಂಬುದನ್ನು ಮನಗಾಣುವ ಅಗತ್ಯವಿದೆ ಎಂದು ಅವರು ಹೇಳಿದರು.
ಪೌರಾಯುಕ್ತ ರಜನೀಕಾಂತ ಶೃಂಗೇರಿ ಮಾತನಾಡಿ, ನಗರ ಪ್ಲಾಸ್ಟಿಕ್ ಮುಕ್ತ ಮಾಡಲು ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದೇ ಮಾದರಿಯಲ್ಲಿ ಜನತೆಯೂ ಮುಂದಾಗಬೇಕು ಎಂದರು.
ಶಶಿ ಚಾರ್ಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ ನಗರಸಭೆಯ ಜೊತೆಗೆ ನಮ್ಮ ಸಂಸ್ಥೆಯಿಂದ ಕೈಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದು ಜನತೆಗೆ 1000 ಬಟ್ಟೆಯ ಚೀಲಗಳು ವಿತರಣೆ ಮಾಡುತ್ತಿದ್ದೇವೆ.
ಇಂದು ಸಾಂಕೇತಿಕವಾಗಿ ವಿತರಣೆ ಮಾಡಿದ್ದು, ನಗರಸಭೆ ಅಧ್ಯಕ್ಷರು ಪೌರಾಯುಕ್ತರು ವಾರ್ಡ ಸಂಚಾರ ವೇಳೆ ನಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಪರಿಸರ ಸ್ನೇಹಿ ಚೀಲಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಉಪಾಧ್ಯಕ್ಷರು ರುಖಿಯಾ ಬೇಗಂ, ಲಿಂಗಾರಡ್ಡಿ, ವಿರುಪಾಕ್ಷಿ, ಸಂತೋಷ, ಮಾಳಪ್ಪ, ಹಣಮಂತ ಸೇರಿದಂತೆ ಅನೇಕರು ಇದ್ದರು.