ಯುನಾನಿ ವೈದ್ಯ ಪದ್ಧತಿಯ ವಿಶೇಷ ಚಿಕಿತ್ಸಾ ವಿಧಾನ | ಗಲ್ಫ್ ದೇಶಗಳಲ್ಲಿ ಪ್ರಚಲಿತ ಪದ್ಧತಿ
ಬೀದರ: ಚೈನಾ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಅನೇಕ ರೋಗಿಗಳಿಗೆ ರಾಮಬಾಣವಾಗಿರುವ ಕಪ್ಪಿಂಗ್ ಥೆರಾಪಿ ಬೀದರ ಜಿಲ್ಲೆಯ ಆಯುಷ್ ಇಲಾಖೆ ಆಸ್ಪತ್ರೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಾವಿರಾರು ರೋಗಿಗಳಿಗೆ ವರದಾನವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಖುತೇಜಾ ಬೇಗಂ ಹೇಳಿದ್ದಾರೆ.
ಯುನಾನಿ ವೈದ್ಯ ಪದ್ಧತಿಯ ವಿಶೇಷ ಚಿಕಿತ್ಸಾ ವಿಧಾನವಾಗಿರುವ ಕಪ್ಪಿಂಗ್ ಥೆರಾಪಿ ಕೀಲು ನೋವು, ಸಂಧಿವಾತ, ಬೆನ್ನು ನೋವು, ಸ್ಪಾಂಡಿಲೈಸಿಸ್, ಪಾರ್ಶ್ವವಾಯು ಸೇರಿದಂತೆ ಹಲವಾರು ರೋಗಗಳನ್ನು ಗುಣಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ರೋಗಿಗಳಿಗೆ ಚೇತೋಹಾರಿ ಚಿಕಿತ್ಸೆಯಾಗಿದ್ದು, ಯಾವುದೇ ಔಷಧಿ ರಹಿತವಾಗಿದೆ. ಇದನ್ನು ರೆಜಿಮಿನಲ್ ಥೆರಾಪಿ ಎನ್ನುತ್ತಾರೆ. ಹಿಜಾಮಾ ಚಿಕಿತ್ಸೆಯಲ್ಲಿ ಕಪ್ಗಳನ್ನು ನೋವಿನ ಭಾಗಕ್ಕೆ ಅಳವಡಿಸಲಾಗುತ್ತದೆ. ಫೈಬರ್ನ ಕಪ್ಗಳಲ್ಲಿ ಸಕ್ಷನ್ ಒತ್ತಡದಿಂದ ವಾಕ್ಯೂಮ್ ನಿರ್ಮಿಸಲಾಗುತ್ತದೆ.
ನೋವಿರುವ ಸ್ಥಳದಲ್ಲಿ ಹಾನಿಕಾರಕ ಮಾರ್ಬಿಡ್ ಪದ್ದಾರ್ಥ ಹೊರತರಲಾಗುತ್ತದೆ. ರೋಗದ ತೀವ್ರತೆಗೆ ಅನುಗುಣವಾಗಿ ಕಪ್ಗಳ ಸಂಖ್ಯೆಯನ್ನು ಬಳಸಲಾಗುತ್ತದೆ. ಸ್ಪಾಂಡಿಲೆಸಿಸ್ ಅಥವಾ ಬೆನ್ನು ನೋವಿಗೆ 5 ರಿಂದ 6 ಕಪ್ಗಳನ್ನು ಅಳವಡಿಸಲಾಗುತ್ತದೆ.
ಇದರಿಂದ ಕೀಲು ನೋವುಗಳು ಹಾಗೂ ಸಂಧಿವಾತ್, ಬೆನ್ನು ನೋವುಗಳನ್ನು ಶಮನಗೊಳಿಸುತ್ತದೆ. ಅಂಗಾಂಗಳು ಮಾಂಸ ಖಂಡಗಳನ್ನು ಬಲಪಡಿಸುತ್ತದೆ ಎಂದು ಯುನಾನಿ ವೈದ್ಯ ಡಾ.ಅಬ್ದುಲ್ ಮಲೀಕ್ ಹೇಳಿದರು.
ದಲಕ್ (ಅಂಗಮರ್ದನ) ರ್ಮೇದ ಹಾಗೂ ರಿಯಾಜತ್ ಚಿಕಿತ್ಸೆಗಳಿಂದ ಮಾಂಸ ಖಂಡಗಳಿಗೆ ವಿಶ್ರಾಂತಿ ದೊರಕುತ್ತದೆ. ಅನಗತ್ಯ ವಸ್ತುಗಳನ್ನು ಹೊರಹಾಕುತ್ತದೆ. ಮಾನಸಿಕ ಒತ್ತಡ ಕಡಿಮೆಗೊಳಿಸಿ ನಿದ್ರಾಹೀನತೆ ನಿವಾರಿಸುತ್ತದೆ. ರಕ್ತ ಸಂಚಾರ ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಯುನಾನಿ ಚಿಕಿತ್ಸಾ ಪದ್ಧತಿಯಂತೆ ಆಯುಷ್ ಆಸ್ಪತ್ರೆಯಲ್ಲಿ ಈವರೆಗೆ ಸಾವಿರಕ್ಕಿಂತ ಹೆಚ್ಚು ರೋಗಿಗಳು ಈ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಡಾ.ವಚನಾ ಶ್ರುತಿ ಹಾಗೂ ಡಾ.ಶುಗುಪ್ತಾ ಶಿರೀನ್ ವಿಶೇಷ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿ ರೋಗಿಗಳಿಗೆ ಗುಣಮುಖರಾಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ಕನಿಷ್ಟ 10 ಜನ ರೋಗಿಗಳು ಪಂಚಕರ್ಮ ಚಿಕಿತ್ಸಾ ವಿಧಾನ ಪಡೆದುಕೊಳ್ಳುತ್ತಿದ್ದಾರೆ ಎಂದು ಆಯುಷ್ಯ ಅಧಿಕಾರಿ ಡಾ.ಖುತೇಜಾ ಬೇಗಂ ಮಾಹಿತಿ ನೀಡಿದ್ದಾರೆ.