ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ
ಸುರಪುರ : ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಬಾಲಕಾರ್ಮಿಕ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಲ್ಲಾ ಇಲಾಖೆ ಸಹಕರಿಸಬೇಕು ಎಂದು ಗೌರವಾನ್ವಿತ ಹೆಚ್ಚುವರಿ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀ ಬಸವರಾಜ ಹೇಳಿದರು.
Sclp Yadagiri PAN-INDIA Rescue and Rehabilitation Campaign Program “A Step to Eradicate Child Labour” (ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ) ಅಂಗವಾಗಿ ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಮಾರುಕಟ್ಟೆ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್‌ಗಳು ಮತ್ತು ಹೊಟೇಲ್‌ಗಳಲ್ಲಿ ಹಠಾತ್ ದಾಳಿ, ತಪಾಸಣೆ ನಡೆಸಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಪೋಸ್ಟರ್ ಹಾಗೂ ಭಿತ್ತಿಪತ್ರಗಳನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಿ ಮಾತನಾಡಿದರು.
ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ 2024ರ ಅಕ್ಟೋಬರ್ 21 ರಿಂದ ನ. 20ರ ವರೆಗೆ ರಕ್ಷಣಾ ಕಾರ್ಯಚರಣೆಗೆ ಸರಕಾರದ ಪ್ರತಿಯೊಂದು ಇಲಾಖೆ ಕೈಜೋಡಿಸಲು ತಿಳಿಸಿದರು.
ಸುರಪುರ ಕಾರ್ಮಿಕ ನಿರೀಕ್ಷಕ ಶಿವಪ್ಪ ಜಮಾದಾರ್ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ 20 ಸಾವಿರದಿಂದ 50 ಸಾವಿರಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಜಿಲ್ಲೆ ಮತ್ತು ತಾಲ್ಲೂಕು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸ ಬೇಕೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ ಜಾಗೃತಿ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಹಠಾತ್ ದಾಳಿ, ತಪಾಸಣೆ ಸಂದರ್ಭದಲ್ಲಿ 4 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಯಿತು.
ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲಪ್ಪ ಕಾಡೂರು, ಆರೋಗ್ಯ ಇಲಾಖೆಯ ಕೆ.ಕೆ. ಪವಾರ್, ಸಮಾಜ ಕಲ್ಯಾಣ ಇಲಾಖೆಯ ಚನ್ನಕೇಶವ, ಪೋಲಿಸ್ ಇಲಾಖೆಯ ಎ.ಎಸ್.ಐ ಭರಣಿ, ಭೀಮರಾಯ, ಮಕ್ಕಳ ರಕ್ಷಣಾ ಘಟಕ ದಶರಥ ನಾಯಕ, ಮಕ್ಕಳ ರಕ್ಷಣ ಘಟಕ 1098 ಕುಮಾರ್, ಡಾನ್ ಬಾಸ್ಕೊ ಸಂಸ್ಥೆಯ ನಿರ್ದೇಶಕ ಡಾ.ಶಾಬು ಪ್ರಾನ್ಸಿಸ್, ಶರಣಪ್ಪ ಸಿ.ಎ ಸಂಸ್ಥೆಯ ಬುಸಪ್ಪನೊರ್ ಬಸ್ಸು, ನ್ಯಾಯಾಂಗ ಇಲಾಖೆಯ ಭೀಮಣ್ಣ ಭನಸೋಡೆ, ಎಲ್.ಎನ್ ಚೌದ್ರಿ, ಶರಣಬಸಪ್ಪ ಬೆಲ್ಲದ್, ರಮೇಶ ಕೆಲ್ಲೂರು ಬಾಲು ನಾಯಕ ಉಪಸ್ಥಿತರಿದ್ದರು.