ಕಿತ್ತೂರು ರಾಣಿ ಚೆನ್ನಮ್ಮ ಕರ್ನಾಟಕದ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ
ಯಾದಗಿರಿ: ಕಿತ್ತೂರು ರಾಣಿ ಚೆನ್ನಮ್ಮ” ನಮ್ಮ ದೇಶದ ಹೆಮ್ಮೆ. ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ದಿಟ್ಟತನದಿಂದ ಹೋರಾಡಿದ ದೇಶದ ಪ್ರಥಮ ಮಹಿಳೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಅವರ ಜೀವನ ಚರಿತ್ರೆ ಓದಿ, ತಿಳಿದು ಪ್ರತಿಯೋಬ್ಬರು ಧೈರ್ಯಶಾಲಿಗಳಾಬೇಕು. ಶತ,ಶತಮಾನಗಳಿಂದಲೂ ನಮ್ಮ ನೆಲದ ಮಹಿಳೆಯರು ದೈರ್ಯಶಾಲಿಯಾಗಿ ಆಗಿನ ಕಾಲದ ಪದ್ಧತಿಯಂತೆಯೇ ವಿದ್ಯೆಯ ಜೊತೆಗೆ ಕೆಲವು ವಿಶೇಷ ಕಲೆಗಳನ್ನು ಕಲಿತು ರಕ್ಷಣೆ ಮಾಡಿಕೊಂಡಿದ್ದಾರೆ. ಇಂದಿನ ಮಹಿಳೆಯರಲ್ಲಿಯೂ ಮುಖ್ಯವಾಗಿ ಧೈರ್ಯಶಾಲಿಗಳಾಗಿಸಿದಲ್ಲಿ ಎಂತಹ ಕಠಿಣ ಸವಾಲು ಮತ್ತು ಸಂದರ್ಭಗಳನ್ನು ಎದುರಿಸಲೂ ಸಾಧ್ಯ. ವಿದ್ಯೆಯ ಜೊತೆಗೆ ದಿಟ್ಟ ಮಹಿಳೆ ಚೆನ್ನಮ್ಮಳ ಆದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.
ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಸೇರಿದಂತೆ ಅನೇಕ ಮಹಿಳೆಯರು ಧೈರ್ಯದಿಂದಲೇ ದೇಶ, ರಾಜ್ಯಗಳನ್ನು ಆಳಿ ವಿರೋಧಿಗಳಿಗೆ ಪಾಠ ಕಲಿಸಿ ಪ್ರಸಿದ್ದಿ ಪಡೆದಿದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ರೇಣುಕಾ ಆರ್. ಚಟ್ರಕಿ ಶಹಾಪುರ ಅವರು ಕಿತ್ತೂರು ರಾಣಿ ಚೆನ್ನಮ್ಮ ಕರ್ನಾಟಕದ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಬಣ್ಣಿಸಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ 1824 ರಲ್ಲಿ ಹೋರಾಟ ಮಾಡಿದ್ದು ಇತಿಹಾಸ ಎಂದು ವಿವರಿಸಿದರು.
ಚನ್ನಮ್ಮಳನ್ನು 15 ನೇ ವಯಸ್ಸಿನಲ್ಲಿಯೇ ಕಿತ್ತೂರಿನ ರಾಜ ಮಲ್ಲಸರ್ಜ ಅವರೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ. ಬಾಲ್ಯದಲ್ಲಿಯೇ ಕೆಲವು ಯುದ್ಧ ನೀತಿಯ ಕಲೆಗಳನ್ನು ಕಲಿತು ಮುಂದೆ ಎದುರಾದ ಪರಸ್ಥಿತಿಯಲ್ಲಿ ಬ್ರಿಟಿಷರ ವಿರುದ್ಧ ತನ್ನ 500 ಸೈನಿಕರೊಂದಿಗೆ ಯುದ್ಧ ಮಾಡಿ ಥ್ಯಾಕರೆ ಎಂಬ ಬ್ರಿಟಿಷರ ಕಂಪನಿ ಮುಖ್ಯಸ್ಥನ ರುಂಡ ಚೆಂಡಾಡುವ ಮೂಲಕ ಕಿತ್ತೂರು ಸಂಸ್ಥಾನದ ಶಕ್ತಿ ಅನಾವರಣಗೊಳಿಸಿ ಅವರಿಗೆ ಸಿಂಹ ಸ್ಚಪ್ನವಾಗಿದ್ದಳು. ಮುತ್ತು,ರತ್ನ, ವಜ್ರ ವೈಡೊರ್ಯ ಗಳನ್ನು ಮಾರುತ್ತಿದ್ದ ಕಿತ್ತೂರಿನ ಮೇಲೆ ಕಣ್ಣು ಇಟ್ಟ ಬ್ರಿಟಿಷರ ಅನೇಕ ಕುತಂತ್ರಗಳನ್ನು ತನ್ನ ಸ್ವಶಕ್ತಿ ಸಾಮರ್ಥ್ಯ ದಿಂದ ಎದುರಿಸಿ ಮೊದಲ ಯುದ್ಧ ಗೆಲ್ಲುತ್ತಾಳೆ. ಆದರೆ, ಬ್ರಿಟಿಷರು ನೇಮಿಸಿದ ನಮ್ಮವರೇ ಆದ ಹಾವೇರಿಯ ವೆಂಕಟರಾಯ ಮತ್ತು ಮಲ್ಲಪ್ಪಶೆಟ್ಟಿ ಅವರ ಕುತಂತ್ರದಿಂದ ಕಿತ್ತೂರು ಸಂಸ್ಥಾನದ ಮೇಲೆ ಹಿಡಿತ ಸಾಧಿಸಿದ ಬ್ರಿಟಿಷರು ಚೆನ್ನಮ್ಮಳನ್ನು ಯುದ್ಧ ದಲ್ಲಿ ಸೋಲಿಸಿ ಬೈಲಹೊಂಗಲ್ ನ ಸೆರೆಮನೆಯಲ್ಲಿ ಇಡುತ್ತಾರೆ. ನಂತರ ಈಕೆಯ ಬಲಗೈ ಭಂಟನಂತೆಯೇ ಇದ್ದ ಸಂಗೋಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾನೆ. ಕೊನೆಗೆ 1829 ಫೆ. 2ರಂದು ಚೆನ್ನಮ್ಮಳ ಸಾವು ಸಂಭವಿಸುತ್ತದೆ ಎಂದು ಅವಳ ಜೀವನದ ಯಶೋಗಾಥೆಯನ್ನು ರೇಣುಕಾ ಚಟ್ರಕಿ ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಹೆಚ್ಚುವರಿ ಡಿಸಿ ಶರಣಬಸಪ್ಪ ಕೊಟೆಪ್ಪಗೋಳ್, ಹೆಚ್ಚುವರಿ ಎಸ್ ಪಿ ಧರಣೇಶ, ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್, ಜಿಪಂ ಅಧಿಕಾರಿ ವಿಜಯಕುಮಾರ, ಸರಕಾರಿ ಪದವಿ ಕಾಲೇಜ್ ಪ್ರಾಂಶುಪಾಲ ಡಾ.ಸುಭಾಷಚಂದ್ರ ಕೌಲಗಿ, ಸಿದ್ದಣ್ಣ ಸಾಹು ಆರಬೋಳ್, ಮಹೇಶ ಆನೆಗುಂದಿ, ನಾಗಭೂಷಣ ಯಾಳಗಿ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್, ಮುರುಗಣ್ಣ ದೇಸಾಯಿ, ದೇವೇಂದ್ರಪ್ಪ ತೋಟದ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೆಶಕಿ ಉತ್ತರಾದೇವಿ ಮಠಪತಿ, ಭೀಮಣ್ಣಗೌಡ, ಸಂಗಣ್ಣ ಸಾಹುಕಾರ, ಸಿದ್ದಣ್ಣ ಮಾಳುರ, ರಾಜು ಮಗಲದಿನ್ನಿ, ಹೊನ್ನಪ್ಪಗೌಡ ಸೇರಿದಂತೆಯೇ ಇತರರಿದ್ದರು.
ರಮೇಶ ಯಾಳಗಿ ಸ್ವಾಗತ ಗೀತೆ ಹಾಡಿದರು. ಬಸವರಾಜ ಸಿನ್ನೂರ್ ನಿರೂಪಿಸಿದರು.