✍️ಡಾ.ಸುರೇಶ್ ಬಂಗ್ಲಾ M.D. Centre for Community Medicine (PGY-2), (AIIMS) – New Delhi.
ಗಡಿ ಜಿಲ್ಲೆಯ ಜನರು ಆರೋಗ್ಯ ಅತೀ ಮುಖ್ಯವಾಗಿದ್ದು, ವಿಶೇಷವಾಗಿ ಮಹಿಳೆಯರಲ್ಲಿ ಕಂಡು ಬರುವ ರಕ್ತ ಹೀನತೆಯ ಕುರಿತು ವಿವಿಧ ಮೂಲಗಳ ವರದಿ ಆಧರಿಸಿ ಏಮ್ಸ್ ನ ವೈದ್ಯ ಡಾ.ಸುರೇಶ ಅವರು ರಕ್ತ ಹೀನತೆ ಯಿಂದ ಮುಕ್ತಿಗೆ ಸಲಹೆ – ಸೂಚನೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ರಕ್ತಹೀನತೆ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಗರ್ಭಿಣಿ ಮಹಿಳೆಯರು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಇದರ ಪರಿಣಾಮ ಅತ್ಯಧಿಕವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-2021) ಪ್ರಕಾರ, ಯಾದಗಿರಿಯಲ್ಲಿ ಶೇಕಡಾ 74 ರಷ್ಟು ಮಕ್ಕಳು ಮತ್ತು ಶೇಕಡಾ 61 ರಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಅಂಕಿ ಅಂಶಗಳು ನಮ್ಮ ಭವಿಷ್ಯದ ಪೀಳಿಗೆಯ ಆರೋಗ್ಯಕ್ಕೆ ಗಂಭೀರ ಎಚ್ಚರಿಕೆ ನೀಡುತ್ತವೆ.
ಸುತ್ತಮುತ್ತಲಿನ ಜಿಲ್ಲೆಗಳೊಂದಿಗೆ ಹೋಲಿಸಿದಾಗ, ಯಾದಗಿರಿಯ ಪರಿಸ್ಥಿತಿ ಹೆಚ್ಚು ಕಳವಳ ಕಾರಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 64% ಮಕ್ಕಳು ಮತ್ತು 53% ಗರ್ಭಿಣಿ ಮಹಿಳೆಯರು, ರಾಯಚೂರು ಜಿಲ್ಲೆಯಲ್ಲಿ 67 % ಮಕ್ಕಳು ಮತ್ತು 62% ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕರ್ನಾಟಕ ರಾಜ್ಯದ ಸರಾಸರಿಯಲ್ಲಿ 64% ಮಕ್ಕಳು ಮತ್ತು 52% ಗರ್ಭಿಣಿ ಮಹಿಳೆಯರು ಈ ಸಮಸ್ಯೆಯಿಂದ ಪೀಡಿತರಾಗಿದ್ದಾರೆ, ಇದರಿಂದ ಸ್ಪಷ್ಟವಾಗುವಂತೆ ನಮ್ಮ ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಮಾತ್ರವಲ್ಲ, ಆರೋಗ್ಯ ವಿಷಯದಲ್ಲೂ ಹಿಂದುಳಿದಿದೆ ಎನ್ನುವುದು ಗಮನಾರ್ಹ.
ಜೀವನ ಚಕ್ರದಲ್ಲಿ ರಕ್ತಹೀನತೆಯ ದುಷ್ಪರಿಣಾಮಗಳು: ರಕ್ತ ಹೀನತೆ ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಗಂಭೀರ ಅಪಾಯ ವನ್ನುಂಟುಮಾಡುತ್ತದೆ. ಇದು ಅಕಾಲಿಕ ಹೆರಿಗೆ, ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ, ತಾಯಿಯ ಸಾವಿನ ಅಪಾಯ ಹಾಗೂ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ತೀವ್ರ ರಕ್ತಹೀನತೆ ಇದ್ದಲ್ಲಿ, ತಾಯಿಯ ಹೃದಯದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ, ಇದು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಯಾದಗಿರಿಯಲ್ಲಿ ಶೇಕಡಾ 46 ರಷ್ಟು ಗರ್ಭಿಣಿ ಮಹಿಳೆಯರು 180 ದಿನಗಳ ಕಾಲ ಐರನ್ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳನ್ನು ಸೇವಿಸುತ್ತಿಲ್ಲ, ಇದು ರಕ್ತಹೀನತೆಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.
ತಾಯಿಗೆ ರಕ್ತಹೀನತೆ ಇದ್ದಾಗ, ಗರ್ಭದಲ್ಲಿರುವ ಮಗುವಿಗೆ ಸಾಕಷ್ಟು ರಕ್ತ, ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗುವುದಿಲ್ಲ. ಇದರಿಂದ ಕಡಿಮೆ ತೂಕದ ಶಿಶುಗಳ ಜನನ, ಅಕಾಲಿಕ ಹೆರಿಗೆ, ಗರ್ಭಾಶಯದಲ್ಲಿ ಬೆಳವಣಿಗೆ ಕುಂಠಿತ ಮತ್ತು ಮಗುವಿನ ಮರಣದ ಅಪಾಯ ಹೆಚ್ಚುತ್ತದೆ. ಗರ್ಭಾವಸ್ಥೆಯಲ್ಲಿ ಕಬ್ಬಿಣದ ಕೊರತೆಯಿಂದ ಮಗುವಿನ ಮೆದುಳಿನ ಬೆಳವಣಿಗೆ ಮತ್ತು ಬುದ್ಧಿಮತ್ತೆಯ ಬೆಳವಣಿಗೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ.
ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ, ಶಾಲೆಯಲ್ಲಿ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತಾರೆ ಹಾಗು ದೈಹಿಕವಾಗಿ ದುರ್ಬಲರಾಗಿರುತ್ತಾರೆ. ರಕ್ತಹೀನತೆಯು ಒಂದು ವಿಷವರ್ತುಲವನ್ನೇ ಸೃಷ್ಟಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವ ತಾಯಿಯಿಂದ ಜನಿಸುವ ಹೆಣ್ಣುಮಗು ಬೆಳೆದು ಗರ್ಭಿಣಿಯಾದಾಗ ಮತ್ತೆ ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಾಳೆ. ಹೀಗೆ ತಲೆಮಾರುಗಳ ಮೂಲಕ ಈ ಸಮಸ್ಯೆ ಮುಂದುವರಿಯುತ್ತದೆ. ಈ ಚಕ್ರವನ್ನು ಮುರಿಯಲು ಗರ್ಭಾವಸ್ಥೆಯ ಮೊದಲು, ಸಕಾಲಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ.
ರಕ್ತಹೀನತೆಯ ಲಕ್ಷಣಗಳು: ರಕ್ತಹೀನತೆಯಲ್ಲಿ ಈ ಕೆಳಕಂಡ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಲಕ್ಷಣಗಳು ರಕ್ತ ಹೀನತೆಗೆ ಮಾತ್ರ ಸೀಮಿತವಾಗಿಲ್ಲ. ಓದುಗರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕತೆ ಇದ್ದಾಗ ಶೀಘ್ರವಾಗಿ ವೈದ್ಯಕೀಯ ನೆರವನ್ನು ಪಡೆಯತಕ್ಕದ್ದು.
ಸತತ ಆಯಾಸ ಮತ್ತು ದುರ್ಬಲತೆ ಉಸಿರಾಟದ ತೊಂದರೆ ಮತ್ತು ಹೃದಯ ಬಡಿತ ವೇಗ ಚರ್ಮ, ತುಟಿ ಅಥವಾ ಕಣ್ಣಿನ ಒಳಭಾಗದಲ್ಲಿ ಬಿಳುಪು ತಲೆಸುತ್ತು, ತಲೆನೋವು ಅಥವಾ ಗಮನ ಕಡಿಮೆಯಾಗುವುದು, ಕೈ ಕಾಲು ಚಳಿಯಾಗಿರುವ ಅನುಭವ ಮಕ್ಕಳಲ್ಲಿ ಆಟ ಮತ್ತು ಊಟದ ಆಸಕ್ತಿ ಕಡಿಮೆ, ನಿಧಾನವಾದ ಶಾರೀರಿಕ ಬೆಳವಣಿಗೆ.
ರಕ್ತಹೀನತೆಯನ್ನು ತಡೆಗಟ್ಟುವ ಪರಿಹಾರಗಳು: ರಕ್ತಹೀನತೆ ಯನ್ನು ತಡೆಗಟ್ಟಲು ಕಬ್ಬಿಣದಿಂದ ಸಮೃದ್ಧವಾದ ಆಹಾರ ಸೇವನೆ ಅತ್ಯಂತ ಅಗತ್ಯ. ಸುಲಭವಾಗಿ ದೊರೆಯುವ ಕೆಳಗಿನ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪ್ರತಿದಿನದ ಊಟದ ಭಾಗವನ್ನಾಗಿಸಿಕೊಳ್ಳಬೇಕು.
ಹಸಿರು ಎಲೆ ತರಕಾರಿಗಳು: ಪಾಲಕ, ಮೆಂತೆ, ಹರಿವೆ ಸೊಪ್ಪು, ಅಮರಾಂತ್ (ಅರಿಸಿನ ಎಲೆಗಳು), ನವಿಲುಮರ ಸೊಪ್ಪು, ಧಾನ್ಯ ಮತ್ತು ಬೇಳೆ ಪದಾರ್ಥಗಳು: ರಾಗಿ, ಜೋಳ, ಸಜ್ಜೆ, ತೊಗರಿ ಬೇಳೆ (ತೂರ್ ದಾಲ್), ಹುರಳಿ ಬೇಳೆ, ಉದ್ದಿನಕಾಳು, ಕಡಲೇ ಕಾಳು ಮತ್ತು ಅವರೆಕಾಳು, ಮಾಂಸಾಹಾರ ಪದಾರ್ಥಗಳು: ಕೋಳಿ ಮತ್ತು ಕುರಿಮಾಂಸ, ಮೀನು ಮತ್ತು ಮೊಟ್ಟೆ.
ಹಣ್ಣುಗಳು: ಸೀತಾಫಲ, ಸೀಬೆಹಣ್ಣು, ಬಾಳೆಹಣ್ಣು, ನೆಲ್ಲಿಕಾಯಿ, ಕಿತ್ತಳೆ, ದಾಳಿಂಬೆ ಮತ್ತು ಚಿಕ್ಕು ಇವು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಕಾರಿಯಾಗುತ್ತವೆ. ಬೆಲ್ಲ, ಖರ್ಜೂರ, ಎಳ್ಳು, ಬಾದಾಮಿ ಮತ್ತು ಕಾಜು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತವೆ. ನಿತ್ಯದ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸುವುದರಿಂದ ದೇಹದಲ್ಲಿ ಅಗತ್ಯ ಕಬ್ಬಿಣದ ಮಟ್ಟವನ್ನು ಕಾಪಾಡಿಕೊಳ್ಳಬಹುದು ಹಾಗೂ ರಕ್ತಹೀನತೆಯುಂಟಾಗುವ ಸಾಧ್ಯತೆಯನ್ನು ಬಹಳವಾಗಿ ಕಡಿಮೆ ಮಾಡಬಹುದು.
ಕಬ್ಬಿಣ ಅಂಶದ ಮಾತ್ರೆ ಸೇವಿಸುತ್ತಿದ್ದರೆ, ಅದನ್ನು ನಿಂಬೆ ಹಣ್ಣಿನ ರಸದೊಂದಿಗೆ ಸೇವಿಸುವುದು ಉತ್ತಮ. ಚಹಾ ಹಾಗು ಹಾಲಿನ ಉತ್ಪನ್ನಗಳು ಕಬ್ಬಿಣದ ಹೀರುವಿಕೆಯನ್ನು ಕುಂಠಿತಗೊಳಿಸುತ್ತವೆ. ಆದ್ದರಿಂದ ಎರಡನ್ನೂ ಒಟ್ಟಿಗೆ ಸೇವಿಸಬಾರದು. ಕ್ಯಾಲ್ಸಿಯಂ ಮಾತ್ರೆಗಳನ್ನು ಕೂಡ ಸೇವಿಸುತ್ತಿದ್ದರೆ ಕಬ್ಬಿಣದ ಮತ್ತು ಕ್ಯಾಲ್ಸಿಯಂ ಮಾತ್ರೆಗಳ ನಡುವೆ ಕನಿಷ್ಠ ಎರಡು ಗಂಟೆಗಳ ಅವಧಿ ಕಡ್ಡಾಯ.
ಸರ್ಕಾರಿ ಯೋಜನೆಗಳ ಪೂರ್ಣ ಲಾಭ ಪಡೆಯಿರಿ: ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ: 6 ತಿಂಗಳಿಂದ 5 ವರ್ಷದ ಮಕ್ಕಳಿಗೆ ಐರನ್ ಮತ್ತು ಫೋಲಿಕ್ ಆಮ್ಲದ ಸಿರಪ್, ಹದಿಹರೆಯದವರಿಗೆ ವಾರಕ್ಕೊಮ್ಮೆ ಗುಳಿಗೆಗಳು, ಮತ್ತು ಗರ್ಭಿಣಿ ಮಹಿಳೆಯರಿಗೆ ದೈನಂದಿನ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ.
ನಿಯಮಿತ ಆರೋಗ್ಯ ಪರೀಕ್ಷೆಗಳು: ಆರೋಗ್ಯ ಉಪಕೇಂದ್ರಗಳಲ್ಲಿ ಉಚಿತ ರಕ್ತಹೀನತೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಗರ್ಭಿಣಿ ಮಹಿಳೆಯರು ಕನಿಷ್ಠ ನಾಲ್ಕು ಪ್ರಸವಪೂರ್ವ ಪರೀಕ್ಷೆಗಳಿಗೆ ಹಾಜರಾಗಬೇಕು ಮತ್ತು 180 ದಿನಗಳ ಕಾಲ ಐರನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.
ರಕ್ತಹೀನತೆಯ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ ಅತ್ಯಗತ್ಯ. ಗ್ರಾಮ ಆರೋಗ್ಯ ಸ್ವಚ್ಛತೆ ಮತ್ತು ಪೋಷಣೆ ಸಮಿತಿಗಳು (VHSNC) ಮತ್ತು ಅಂಗನವಾಡಿ ಕೇಂದ್ರಗಳು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸ್ಥಳೀಯ ಆಹಾರ ಪದ್ಧತಿಗಳನ್ನು ಗೌರವಿಸುತ್ತಾ, ಸುಲಭವಾಗಿ ಲಭ್ಯವಿರುವ ಮತ್ತು ಕೈಗೆಟುಕುವ ಪೌಷ್ಟಿಕ ಆಹಾರಗಳ ಬಗ್ಗೆ ಜಾಗೃತಿ ಮೂಡಿಸಬೇಕು.
ರಕ್ತಹೀನತೆ ಮೌನವಾಗಿ ನಮ್ಮ ಮಕ್ಕಳು ಮತ್ತು ಮಹಿಳೆಯರ ಆರೋಗ್ಯವನ್ನು ಹದಗೆಡಿಸುತ್ತಿದೆ. ಸರಿಯಾದ ಪೋಷಣೆ, ಸರ್ಕಾರಿ ಯೋಜನೆಗಳ ಸಂಪೂರ್ಣ ಬಳಕೆ ಮತ್ತು ಸಮುದಾಯ ಭಾಗವಹಿಸುವಿಕೆಯ ಮೂಲಕ ಯಾದಗಿರಿಯನ್ನು ರಕ್ತಹೀನತೆ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದು. ಪ್ರತಿಯೊಬ್ಬರೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುವುದು ಅನಿವಾರ್ಯ.
