ಬಾಲ್ಯ ವಿವಾಹ ಸಮಾಜಕ್ಕೆ ಕೆಟ್ಟ ಪಿಡುಗು | ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿಕೆ
ಯಾದಗಿರಿ: ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದ್ದು, ಇದರ ವಿರುದ್ಧ ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮರಿಯಪ್ಪ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಿಟೋರಿಯಂ ಹಾಲ್ ನಲ್ಲಿ ನಡೆದ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ ಮತ್ತು ನೇರ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ತಡೆಗಟ್ಟುವಲ್ಲಿ ವಿಷೇಷಾಧಿಕಾರಿಗಳು ಜಾಗೃತಿ ವಹಿಸಬೇಕು. ಬಾಲ್ಯ ವಿವಾಹ ತಡೆಗಟ್ಟಿ ಮಕ್ಕಳ ಬಾಳನ್ನು ಬೆಳಗಬೇಕು ಎಂದು ಹೇಳಿದರು.
ಸರ್ಕಾರ ಬಾಲ್ಯ ವಿವಾಹ ವಿರುದ್ಧ ಕಾನೂನು ಜಾರಿಗೆ ತಂದಿದ್ದು, ಅದನ್ನು ಯಾವ ರೀತಿ ಅನುಸರಿಸಿ ಬಾಲ್ಯ ವಿವಾಹ ತಡೆಗಟ್ಟಬಹುದು ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿದುಕೊಂಡು ಇತರರಿಗೂ ಇದರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಬಡತನ, ಮೂಢನಂಬಿಕೆಯಿಂದ ಬಾಲ್ಯವಿವಾಹ ನಡೆಯುತ್ತಿದೆ. 30 ವರ್ಷಗಳ ಹಿಂದೆ ಬಾಲ್ಯ ವಿವಾಹ ಸಮಾಜದಲ್ಲಿ ಹೆಚ್ಚಾಗಿತ್ತು. ಇದಕ್ಕೆ ವರದಕ್ಷಿಣೆಯೂ ಕಾರಣವಾಗಿದೆ. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳ ವಿವಾಹನ್ನು ನಿಶ್ಚಯಿಸಿಕೊಂಡು ಇಂತಹ ವಿವಾಹ ನಡೆಸಲಾಗುತ್ತಿದೆ. ನಾನಾ ಇಲಾಖೆಯ ಅಧಿಕಾರಿಗಳು, ಸಮಾಜದ ಹೊಣೆಗಾರಿಕೆ ಮತ್ತು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ಅನಕ್ಷರತೆ, ಮೂಢನಂಬಿಕೆಯೂ ಕಾರಣ. ಬಾಲ್ಯ ವಿವಾಹ, ಬಡತನ, ಅನಕ್ಷರತೆ, ಮೂಢನಂಬಿಕೆ, ವರದಕ್ಷಿಣೆ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದೆ. 21 ವರ್ಷರೊಳಗಿನ ಹುಡುಗ ಹಾಗೂ 18 ವರ್ಷ ಒಳಗಿನ ಹುಡುಗಿಯರ ನಡುವೆ ಇಲ್ಲವೆ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇದನ್ನು ಆದಷ್ಟು ತಡೆಗಟ್ಟಿ ಬಾಲ್ಯವಿವಾಹ ಸಂಪೂರ್ಣವಾಗಿ ತೊಲಗಿಸಬೇಕು ಎಂದು ಅವರು ತಿಳಿಸಿದರು.
ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆ ಅಷ್ಟೇ ಅಲ್ಲದೆ ಎಲ್ಲರೂ ಮುಂದಾಗಬೇಕು. ಶಿಕ್ಷಣದ ಕೊರತೆಯಿಂದಾಗಿ ಇಂತಹ ಪಿಡುಗುಗಳು ಸಮಾಜದಲ್ಲಿ ಇಂದಿಗೂ ಕಾಡುತ್ತಿವೆ. ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಅರಿಯಬೇಕು. ಬಾಲ್ಯ ವಿವಾಹಕ್ಕೆ ಮುಂದಾಗುವವರಿಗೆ ಶಿಕ್ಷೆ ನೀಡುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.
2006ರ ವಿಶೇಷ ಕಾಯ್ದೆಯನ್ನು ಬಾಲ್ಯ ವಿವಾಹದಲ್ಲಿ ತರಲಾಗಿದೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಮಿಟಿ ಇದ್ದು, ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವಿದೆ. ಬಾಲ್ಯ ವಿವಾಹ ನಿಗದಿಪಡಿಸುವವರು, ಪುರೋಹಿತರು, ಮದುವೆ ಮಂಟಪದ ಮಾಲೀಕರು ಹಾಗೂ ಪೋಷಕರು, ಸಂಬಂಧಿಕರ ಮೇಲೆ ಪ್ರಕರಣ ದಾಖಲಿಸ ಬಹುದಾಗಿದ್ದು ಇವರೆಲ್ಲರೂ ಅಪರಾಧಿಗಳಾಗುತ್ತಾರೆ ಎಂದು ತಿಳಿಸಿದರು.
ಬಾಲ್ಯ ವಿವಾಹ ನಡೆಸುತ್ತಿದ್ದ ಬಗ್ಗೆ ದೂರುಗಳನ್ನು ಕೈಗೆತ್ತಿಕೊಂಡು ಈ ಬಾಲ್ಯವಿವಾಹ ನಿಲ್ಲಿಸಬೇಕು. ಜಿಲ್ಲೆಗಳಿಗೆ ಹೋಲಿಸಿದಾಗ ಜಿಲ್ಲೆಯಲ್ಲಿ ಕಡಿಮೆ ಇದೆ. ಬಾಲ್ಯವಿವಾಹ ಪ್ರಕರಣ ತೀರ ಕಡಿಮೆಯಾಗಿದೆ. ಇಂತಹ ಪಿಡುಗನ್ನು ತಡೆಗಟ್ಟಲು ಕೇವಲ ಮಹಿಳಾ ಮತ್ತು ಮಕ್ಕಳ ಇಲಾಖೆಯೊಂದೇ ಜವಾಬ್ದಾರಿಯಲ್ಲ. ಇತರೆ ಇಲಾಖೆಯವರು ಸಹ ಇದನ್ನು ತಡೆಗಟ್ಟುವಂತಹ ಕೆಲಸ ಮಾಡಬೇಕು. ಸಾರ್ವಜನಿಕರು ಸಹ ಇದನ್ನು ತಡೆಗಟ್ಟುವ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಡಾ. ಶುಭಾಷಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆ ಅಷ್ಟೇ ಅಲ್ಲದೆ ಎಲ್ಲರೂ ಮುಂದಾಗಬೇಕು. ಶಿಕ್ಷಣದ ಕೊರತೆಯಿಂದಾಗಿ ಇಂತಹ ಪಿಡುಗುಗಳು ಸಮಾಜದಲ್ಲಿ ಇಂದಿಗೂ ಕಾಡುತ್ತಿವೆ.
ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಸಮಾಜದ ಆಗು ಹೋಗುಗಳ ಬಗ್ಗೆ ಅರಿಯಬೇಕಾದ ಅವಶ್ಯಕತೆ ಇದೆ. ಬಾಲ್ಯ ವಿವಾಹಕ್ಕೆ ಮುಂದಾಗುವವರಿಗೆ ಶಿಕ್ಷೆ ನೀಡುವುದರ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಧರಣೇಶ್, ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ಹಣಮಂತ, ಸಂಯೋಜನ ನಿರ್ದೇಶಕರು ಜಿಲ್ಲಾ ಬಾಲಕಾರ್ಮಿಕ ಸಂಯೋಜನ ಸೊಸೈಟಿಯ ರಿಯಾಜ್ ಪಟೇಲ್, ಜಿಲ್ಲಾ ಸಂಚಾಲಕರು, ಮಾರ್ಗದರ್ಶಿ ಸಂಸ್ಥೆ, ಆಶಾ ಬೇಗಂ, ಗುರುಪ್ರಸಾದ್ ವೈದ್ಯ ಸಾಹಿತಿ, ಸಾಬಯ್ಯ ಕಲಾಲ್ , ಗೋವಿಂದ್ ರಾಥೋಡ್ ಸಿಬ್ಬಂದಿಗಳಾದ ತಾಯಮ್ಮ, ಬಾಲಯ್ಯ, ಬಸವರಾಜ್ ಮೊಹಮ್ಮದ್ ಪಟೇಲ್ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.