ಅಥಣಿಯ ಮೋಟಗಿ ಮಠದ ರಾಜ್ಯ ಪ್ರಶಸ್ತಿ | ಜ.13 ರಂದು ಪ್ರದಾನ
ಬೆಳಗಾವಿ : ಜಿಲ್ಲೆಯ ಅಥಣಿ ಮೋಟಗಿ ಮಠದ ವತಿಯಿಂದ ನೀಡುವ ರಾಜ್ಯಮಟ್ಟದ ಸಮಾಜಸೇವಾ ಭೂಷಣ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಸಾಮಾಜಿಕ – ಸಾಂಸ್ಕೃತಿಕ ಸಂಘಟಕ ಡಾ.ಸಿದ್ಧರಾಜರೆಡ್ಡಿ ಭಾಜನರಾಗಿದ್ದಾರೆ ಎಂದು ಪೀಠಾಧಿಪತಿ ಗಳಾದ ಪ್ರಭುಚನ್ನಬಸವ ಸ್ವಾಮೀಜಿ ತಿಳಿಸಿದ್ದಾರೆ.
ಗಡಿಭಾಗದ ಕನ್ನಡ ಮಠವೆಂದೇ ಪ್ರಖ್ಯಾತಿ ಪಡೆದ ಅಥಣಿ ಮೋಟಗಿ ಮಠದ ಲಿಂಗೈಕ್ಯ ಗುರುಗಳ ಪುಣ್ಯಾರಾಧನೆಯ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಜನೆವರಿ 11-12-13 ರಂದು ಸಾಮರಸ್ಯದ ಸಮಾಜೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.
ಜನೆವರಿ 13 ರಂದು ಸಂಜೆ ನಡೆಯುವ ಅಥಣೀಶರ ಸಮಾಜಸೇವಾ ಕಾಯಕ ಹಾಗೂ ಗುರುಬಸವೇಶ್ವರ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಮಠಾಧೀಶರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಡಾ.ಸಿದ್ಧರಾಜರೆಡ್ಡಿ ಅವರಿಗೆ ಸಮಾಜಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಲಯನ್ಸ್ ಕ್ಲಬ್ ಕಾರ್ಯದರ್ಶಿಯಾಗಿ, ಜನತಾ ಬಜಾರ್ ನ ನಿರ್ದೇಶಕರಾಗಿ,ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ತನಾರತಿ ಸಾಂಸ್ಕೃತಿಕ ಪ್ರತಿಷ್ಠಾನ ದ ಸಂಸ್ಥಾಪಕ ಅಧ್ಯಕ್ಷರಾಗಿ, ಶ್ರೀ ಸಿದ್ಧ ಸಂಪದ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾಗಿ, ಭಾರತೀಯ ಯುವ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿದ್ಧರಾಜರೆಡ್ಡಿ ಯುವಶಕ್ತಿಗೆ ಮಾದರಿಯಾಗಿದ್ದಾರೆ.
ಮೂಲತಃ ಸಮಾಜಕಾರ್ಯದ ಉಪನ್ಯಾಸಕರೂ, ಅತ್ಯುತ್ತಮ ವಾಗ್ಮಿಗಳಾದ ಡಾ.ಸಿದ್ಧರಾಜರೆಡ್ಡಿ ಅವರ ಜನಮುಖಿ, ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪೂಜ್ಯರು ತಿಳಿಸಿದ್ದಾರೆ.
ಹರ್ಷ: ಡಾ.ಸಿದ್ಧರಾಜರೆಡ್ಡಿ ಅವರಿಗೆ ಅಥಣಿ ಮೋಟಗಿ ಮಠದ ಪ್ರತಿಷ್ಠಿತ “ಸಮಾಜಸೇವಾ ಭೂಷಣ” ಪ್ರಶಸ್ತಿ ದೊರೆತಿರುವುದಕ್ಕೆ ಯಾದಗಿರಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ, ಹಿರಿಯರಾದ ರಾಚಣ್ಣಗೌಡ ಮುದ್ನಾಳ, ವಿಶ್ವನಾಥರೆಡ್ಡಿ ದರ್ಶನಾಪೂರ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ನಾಗರತ್ನ ಕುಪ್ಪಿ, ರಾಮರೆಡ್ಡಿಗೌಡ ತಂಗಡಗಿ, ಡಾ.ಭೀಮಣ್ಣ ಮೇಟಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಲಯನ್ಸ್ ಕ್ಲಬ್ ಅಧ್ಯಕ್ಷ ಹನುಮಾನದಾಸ ಮುಂದಡಾ, ಮುಖಂಡರಾದ ಸೋಮಶೇಖರ ಮಣ್ಣೂರ, ಡಾ.ಸಿ.ಎಂ. ಪಾಟೀಲ, ಡಾ.ಜಿ.ಡಿ.ಹುನಕುಂಟಿ, ಮಲ್ಲಣ್ಣಗೌಡ ಹಳಿಮನಿ ಕೌಳೂರ, ರಮೇಶ ದೊಡ್ಡಮನಿ,ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿ,ಅಭಿನಂದನೆ ಸಲ್ಲಿಸಿದ್ದಾರೆ.