ರಾಜ್ಯದ ಮೂರೂ ಕ್ಷೇತ್ರಗಳನ್ನು ವಶಪಡಿಸಿಕೊಂಡ “ಕೈ”
ಬೆಂಗಳೂರು: ರಾಜ್ಯದಲ್ಲಿ ಪ್ರತಿಪಕ್ಷ ಮತ್ತು ವಿರೋಧ ಪಕ್ಷಗಳ ತೀವ್ರ ಜಿದ್ದಾಜಿದ್ದಿನ ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗಳ ಫಲಿತಾಂಶ ಇಂದು ಹೊರಬಿದ್ದಿದ್ದು, ರಾಜ್ಯದ ಜನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಒಪ್ಪಿಕೊಂಡಿ ದ್ದಾರೆ ಎನ್ನುವುದು ಫಲಿತಾಂಶದಿಂದ ಬಯಲಾಗಿದೆ.
ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಆ ಡಳಿತರೂಢ ಕಾಂಗ್ರೆಸ್ ಮೂರೂ ಕ್ಷೇತ್ರ ಗೆಲ್ಲುತ್ತಾ? ಅಥವಾ ಎನ್‌ಡಿಎ ಮೇಲುಗೈ ಸಾಧಿಸುತ್ತಾ ಎನ್ನುವ ಕುತೂಹಲ ಇತ್ತು. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರು 16 ನೇ ಸುತ್ತಿನಲ್ಲಿಯೂ 11 ಗಂಟೆ ವೇಳೆಗೆ 8881 ಮತಗಳ ಮುನ್ನಡೆ ಸಾಧಿಸಿದ್ದು, ಇನ್ನು ಕೇವಲ 3 ಸುತ್ತಿನ ಎಣಿಕೆ ಮಾತ್ರ ಬಾಕಿ ಇತ್ತು.
ಇನ್ನೂ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು , ಶಿಗ್ಗಾವಿ ಯಲ್ಲಿ ಭರತ ಬೊಮ್ಮಾಯಿ ಅವರ ಪ್ರತಿಸ್ಪರ್ಧಿ ಯಾಸೀರ್ ಪಠಾಣ್ 10 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದರು.
ಅಂತಿಮವಾಗಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅನ್ನಪೂರ್ಣ ತುಕಾರಾಮ್ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ 9,645 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅನ್ನಪೂರ್ಣ ಅವರು 93,606 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬಂಗಾರು ಹನುಮಂತು 83,961 ಮತಗಳನ್ನು ಗಳಿಸಿದ್ದಾರೆ.
ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ವಿರುದ್ಧ ಪರಾಭವಗೊಂಡಿದ್ದಾರೆ. ಭರತ್ ಬೊಮ್ಮಾಯಿ 86,960 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ನ ಯಾಸಿರ್ ಅಹ್ಮದ್ ಖಾನ್ ಅವರು 100587 ಮತಗಳನ್ನು ಪಡೆದು 13627 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಸಿ.ಪಿ ಯೋಗೇಶ್ವರ್ 112388 ಮತಗಳನ್ನು ಪಡೆದು ಜಯಗಳಿಸಿದರೆ, ನಿಖಿಲ್ ಕುಮಾರಸ್ವಾಮಿ 87,031 ಮತಗಳನ್ನು ಪಡೆದಿದ್ದಾರೆ.
ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ: ರಾಜ್ಯದಲ್ಲಿ 3 ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಮನ್ನಣೆ ನೀಡಿದ್ದು, ಗಡಿ ಜಿಲ್ಲೆಯ ಯಾದಗಿರಿಯಲ್ಲಿ ಕೈ ಕಾರ್ಯಕರ್ತರು ಸಂಭ್ರಮ ಆಚರಿಸಿದರು.
ಗುರುಮಠಕಲ್ ನಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಧಶರಥರಾವ ಧಡಂಗೆ, ಬಾಬು ತಲಾರಿ, ವಿಜಯ ನೀರೆಟಿ, ಆನಂದ ಯದ್ಲಾಪುರ,ಕಾಶಪ್ಪ ಚಿನ್ನಾಕಾರ, ವೆಂಕಟರಾಮುಲು, ಹಣಮಂತು ಶನಿವಾರಂ, ರವಿ, ಸಾಯಬಣ್ಣ, ಸೈಯದ್ ಬಾಬಾ, ಫಯಾಜ್ ಅಹ್ಮದ್ ಸೇರಿದಂತೆ ಹಲವರು ಇದ್ದರು.