ಆರೋಗ್ಯ ಇಲಾಖೆ ಎನ್ ಹೆಚ್ ಎಂ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಹಲವಾರು ಹೋರಾಟ ನಡೆದಿದೆ. ಆದರೂ ಈವರೆಗೆ ಸರ್ಕಾರ ಬೇಡಿಕೆ ಅನುಷ್ಠಾನಕ್ಕೆ ಕ್ರಮವಹಿಸಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದ್ದು, 15 ದಿನಗಳೊಳಗೆ ಸ್ಪಂದನೆ ಸಿಗದಿದ್ದರೆ ಹೋರಾಟ ಅನಿವಾರ್ಯ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಸರ್ಕಾರಕ್ಕೆ ಗಡುವು ನೀಡಿದೆ.
ಬೆಂಗಳೂರು: ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಹೋರಾಟಗಳನ್ನು ಮಾಡಿದ್ದು ಸರ್ಕಾರದಿಂದ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಆದರೆ ಇಲ್ಲಿಯವರೆಗೂ ಬೇಡಿಕೆಗಳ ಅನುಷ್ಟಾನದಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ವರದಿಯನ್ನೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಪ್ರ.ಕಾ. ಗವಿಸಿದ್ದಪ್ಪ ಡಿ.ಉಪ್ಪಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನಿನಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ಇದೆ ಎಂದಾದ ಮೇಲೆ ಸಿಬ್ಬಂದಿಗಳಿಗೆ ಸೌಲಭ್ಯಗಳನ್ನು ನೀಡಲು ಮೀನಾಮೇಶ ಎಣಿಸುವುದು ಯಾಕೆ? ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ವತಿಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಅನಿರ್ಧಿಷ್ಠಾವಧಿ ಮುಷ್ಕರವನ್ನು ಮಾಡಲು ಸಂಘದಿಂದ ನಿರ್ಧರಿಸಲಾಗಿದೆ.
ಮುಂದಿನ 15 ದಿನಗಳ ನಂತರ ಯಾವುದೇ ದಿನದಂದು ಹೋರಾಟ ಆರಂಭಿಸಲಾಗುವುದು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
ಪ್ರಮುಖ 23 ಬೇಡಿಕೆ ಈಡೇರಿಕೆ ನೌಕರರು ಒತ್ತಾಯಿಸಿದ್ದು, ಮಣಿಪುರ ಮಾದರಿಯಲ್ಲಿ ಎನ್ ಹೆಚ್ ಎಂ ನೌಕರರ ಸೇವೆ ಕಾಯಂ ಗೊಳಿಸುವುದು, ಕನಿಷ್ಠ ವೇತನದ ಬದಲು ದೆಹಲಿ ಮಾದರಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡುವುದು, ಖಾಲಿ ಇರುವ, ಪರಸ್ಪರ ಒಪ್ಪಿಗೆ, ವೈದ್ಯಕೀಯ ಹಾಗೂ ಪತಿಪತ್ನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಆದೇಶವನ್ನು ಕೂಡಲೇ ಹೊರಡಿಸುವುದು.
ಸರ್ಕಾರಿ ಆದೇಶದಂತೆ ಜಿಲ್ಲೆಗಳಿಗೆ ಪ್ರಸಕ್ತ ಆರ್ಥಿಕ ವರ್ಷದ 15% ವೇತನ ಹೆಚ್ಚಳದ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವುದು, ಶಾಲಾ ಆರೋಗ್ಯ ಕಾರ್ಯಕ್ರಮಗಳನ್ನು ಮಾಡಲು RBSK ಕಾರ್ಯಕ್ರಮದಡಿಯಲ್ಲಿ ವೈದ್ಯರ ಸಹಿತ ಸಿಬ್ಬಂದಿಗಳನ್ನು ನೇಮಕಾತಿ ಮಾಡಿದ್ದು ಬೇರೆ ಜಿಲ್ಲೆಗಳಲ್ಲಿ ಹೆಚ್ಚುವರಿ ಬೇಡಿಕೆ ಇರುವ ಕಾರಣ 24 ತಂಡದ 96 ಸಿಬ್ಬಂದಿಗಳನ್ನು ಕೈ ಬಿಡದೇ ಆ ಸಿಬ್ಬಂದಿಗಳಿಗೆ ಅದೇ ಜಿಲ್ಲೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವುದು.
ಎನ್.ಹೆಚ್ಎಮ್ ಸಿಬ್ಬಂದಿಗಳಿಗೆ 2017-18ರಲ್ಲಿ ಮೂಲ ವೇತನ ನಿಗದಿ ಮಾಡಿದ್ದು ಈವರೆಗೂ ಪರಿಷ್ಕರಣೆ ಮಾಡದೇ ಇದ್ದು, ಕಾಲಕಾಲಕ್ಕೆ ಮೂಲ ವೇತನವನ್ನು ಪರಿಷ್ಕರಣೆ, ಪ್ಯಾರಾ ಮೆಡಿಕಲ್ ವಿಶೇಷ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಈ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವುದು.
ನಿವೃತ್ತ ಐಎಎಸ್ ಅಧಿಕಾರಿ ಶ್ರೀ ನಿವಾಸಾಚಾರಿ ವರದಿಯಂತೆ ಕೃಪಾಂಕವನ್ನು ನೀಡಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಆದರೆ ವರ್ಷಕ್ಕೆ 2% ಇರುವ ಕೃಪಾಂಕವನ್ನು 3% ರಷ್ಟು ಮಾಡಿ ಗರಿಷ್ಠ 30 ಕ್ಕೆ ಹೆಚ್ಚಿಸುವುದು ಹಾಗೂ ಬೇರೆ ಇಲಾಖೆಯಲ್ಲಿ ಮಾಡಿಕೊಳ್ಳುವ ನೇಮಕಾತಿಗಳಿಗೂ ಸಹ ಅರ್ಹ ಎನ್.ಹೆಚ್ಎಮ್ ಸಿಬ್ಬಂದಿಗಳು ಅರ್ಜಿ ಹಾಕುವಾಗ ಕೃಪಾಂಕ ಮತ್ತು ವಯೋಮಿತಿ ನೀಡುವುದು, 17055 ಗುತ್ತಿಗೆ ಸಿಬ್ಬಂದಿಗಳಿಗೆ 15% ವೇತನ ಹೆಚ್ಚಿಸಿ ನೀಡಿದಂತೆ ಹೊರಗುತ್ತಿಗೆ ನೌಕರರ ಸಹಿತ ಬಾಕಿ ಉಳಿದ ಗುತ್ತಿಗೆ ನೌಕರರಿಗೂ ಸಹ 15% ವೇತನ ಹೆಚ್ಚಿಸುವುದು.
2023ರ ಜ.1 ರ ನಂತರ 05 ವರ್ಷ ಪೂರ್ಣ ಗೊಳಿಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೂ ಸಹ 15% ವೇತನವನ್ನು ಅನ್ವಯ ಮಾಡುವುದು ಸೇರಿದಂತೆ ಪ್ರತಿ ತಿಂಗಳು ವೇತನ ಪಾವತಿಸಲು NHM ಸಿಬ್ಬಂದಿಗಳು ಮುಂಗಡ ರಶೀದಿ ಸಲ್ಲಿಸುವ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಡುವಂತೆ ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಸರಿಯಾದ ಸಮಯಕ್ಕೆ ವೇತನ ನೀಡುವುದು ಹಾಗೂ HRMS PAYROLL ಮೂಲಕ ವೇತನವನ್ನು ಹಾಗೂ ವೇತನ ದೃಢೀಕರಣ ಪತ್ರವನ್ನು ನೀಡಲು ಕೂಡಲೇ ಆದೇಶ ಹೊರಡಿಸುವುದು.
ಬಾಗಲಕೋಟೆ ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳ ಒಳಜಗಳದಿಂದ ಎನ್.ಹೆಚ್.ಎಮ್ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 116 ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ್ದು ಈ ನೌಕರರನ್ನು ಮುಂದುವರೆಸಲು ಆದೇಶ ನೀಡಬೇಕು ಎನ್ನುವುದು ಸೇರಿ ಹಲವು ಬೇಡಿಕೆ ಸೇರಿವೆ.
ಸಾರ್ವಜನಿಕರಿಗೆ ಅಗತ್ಯವಾದ ಈ ಇಲಾಖೆಯ ನೌಕರರನ್ನು ಮುಷ್ಕರ ಮಾಡುವ ಅನಿವಾರ್ಯ ಸ್ಥಿತಿಗೆ ದೂಡಬಾರದೆಂದು ಎಂದು ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.