ಪ್ರೇಮದ ಹೆಸರಿನಲ್ಲಿ ನಡೆಯುವ ಅಶ್ಲೀಲತೆ ಖಂಡನೆ | ಶಾಲೆ-ಕಾಲೇಜು ಆವರಣಗಳಲ್ಲಿ ಮಹಿಳೆಯರ ಮೇಲಿನ ಕಿರುಕುಳ ತಡೆಗೆ ಸ್ಪಷ್ಟ ಮಾರ್ಗಸೂಚಿ ಜಾರಿಗೆ ಒತ್ತಾಯ
ಬೀದರ್ : ವೆಲಂಟೈನ್ ಡೇ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಹಾಗೂ ಯುವಪೀಳಿಗೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪಾಶ್ಚಾತ್ಯ ಪ್ರಭಾವದಿಂದ ಫೇ. 14ರಂದು ವೆಲಂಟೈನ್ ಡೇ ಎಂದು ಆಚರಿಸುವ ಪ್ರಕ್ರಿಯೆ ಭಾರತದಲ್ಲೂ ವ್ಯಾಪಕವಾಗಿ ಬೆಳೆಯುತ್ತಿದೆ. ಪ್ರೇಮದ ಹೆಸರಿನಲ್ಲಿ ನಡೆಯುವ ಅಶ್ಲೀಲತೆ, ಏಕಮುಖ ಪ್ರೀತಿಯಿಂದ ಉಂಟಾಗುವ ಕಿರುಕುಳ, ಬೆದರಿಕೆ ಹಾಗೂ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಯುವಕರಲ್ಲಿ ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿರುವುದರಿಂದ ಅವರ ಶೈಕ್ಷಣಿಕ ಜೀವನ, ಆರೋಗ್ಯ ಮತ್ತು ಕುಟುಂಬ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗ, ಮಾನಸಿಕ ಒತ್ತಡ ಹಾಗೂ ಅನೈತಿಕ ಚಟುವಟಿಕೆಗಳ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದು ದೂರಲಾಗಿದೆ. ಶಾಲೆ-ಕಾಲೇಜು ಆವರಣಗಳಲ್ಲಿ ಮಹಿಳೆಯರ ಮೇಲಿನ ಕಿರುಕುಳ ತಡೆಗೆ ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡಬೇಕು.
ಮಾದಕ ವಸ್ತು, ಮದ್ಯಪಾನ ಹಾಗೂ ಅನೈತಿಕ ಪಾರ್ಟಿ ಆಯೋಜಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯುವಕರಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ಆಯೋಜನೆ ಮಾಡಬೇಕು. ಯುವಪೀಳಿಗೆಯ ಭವಿಷ್ಯ ರಕ್ಷಣೆ ಹಾಗೂ ಸಮಾಜದ ಹಿತದೃಷ್ಟಿಯಿಂದ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಗುರು ಪ್ರಸಾದ ರಾಜ್ಯ ಸಂಯೋಜಕ ಹಿಂದು ಜನ, ಶ್ರೀಕಾಂತ್ ಮೋದಿ ಜಿಲ್ಲಾ ಸಂಯೋಜಕರು, ಗೋಪಾಲಕೃಷ್ಣ, ಮಾಯಾವತಿ, ಅನಿಲ್ ಜಗದೇವ್, ಬಾಬುರಾವ್ ಬಿರಾದರ್, ಡಾ. ಆರ್. ಕೆ.ಚಾರಿ, ಶುಭಾಷ್ ಪಾಟೀಲ್, ಡಾ. ಸತೀಶ್ ಪಾಟೀಲ್, ಡಾ. ದೇವಪ್ಪ ಮನವಿ ಸಲ್ಲಿಸಿದರು.
