ಕಂಬನಿ ತುಂಬಿದ ಕಣ್ಣು, ತಂದೆಯ ಕಾರ್ಯ ಸ್ಮರಿಸಿದ ಈಶ್ವರ ಖಂಡ್ರೆ | ಹಲವು ಸಂವಿಧಾನಿಕ ಹುದ್ದೆ ನಿರ್ವಹಣೆ, ಬೀದರ ಅಭಿವೃದ್ಧಿಗೆ ಶ್ರಮಿಸಿದ ಸೇನಾನಿ | ಅಂತ್ಯಕ್ರಿಯೆಯಲ್ಲಿ ರಂಭಾಪುರಿ ಶ್ರೀಗಳು ಭಾಗಿ | ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆ
ಬೀದರ : ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ನಮ್ಮ ಸಮಾಜ, ಸಮುದಾಯಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದರು, ಸಮಾಜದ ರಕ್ಷಣೆಗೆ ಸದಾ ಅವರು ಮುಂದೆ ನಿಲ್ಲುತ್ತಿದ್ದರು ಎಂದು ಬಾಳೆಹೊನ್ನೂರು ಶ್ರೀರಂಬಾಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭಾಲ್ಕಿಯಲ್ಲಿಂದು ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಿಷ್ಠುರವಾದಿಗಳಾಗಿದ್ದ ಅವರು ಸಮಾಜದ ಅಭ್ಯುದಯಕ್ಕಾಗಿ ಮಾಡಿರುವ ಕಾರ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸದಾ ಧರ್ಮಮಾರ್ಗದಲ್ಲಿ ನಡೆದ ಸಚ್ಚಾರಿತ್ರ್ಯದ ರಾಜಕಾರಣಿ, ಸಮಾಜದ ಧುರೀಣರಾದ ಭೀಮಣ್ಣ ಖಂಡ್ರೆ ಅವರನ್ನು 2 ದಿನಗಳ ಹಿಂದೆ ಬಂದು ನೋಡಿ ಅವರ ಕಿವಿಯಲ್ಲಿ ಪಂಚಾಕ್ಷರಿ ಮಂತ್ರೋಪದೇಶ ಮಾಡಿ ತೆರಳಿದ್ದನ್ನು ಸ್ಮರಿಸಿದರು. ಲೋಕನಾಯಕರಾಗಿ ಆದರ್ಶ ಬದುಕು ನಡೆಸಿದ ಅವರಿಗೆ ಶಿವಸಾಯುಜ್ಯ ದೊರಕಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ತಂದೆಯ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದ ಸಚಿವ ಈಶ್ವರ ಖಂಡ್ರೆ, ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು ಎಂದರು.
ಶುಕ್ರವಾರ ಶಿವೈಕ್ಯರಾದ ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಪಾರ್ಥವ ಶರೀರಕ್ಕೆ ಪೂಜೆ ಸಲ್ಲಿಸಿದ ತರುವಾಯ ಮಾತನಾಡಿದ ಅವರು, ಬಸವಾದಿ ಶರಣರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಾವು ಜೀವಿಸಿದ್ದ ನೂರ್ಕಾಲವೂ ಕಾಯಕಯೋಗಿಯಾಗಿ, ಕರ್ಮಯೋಗಿಯಾಗಿ ಜನರಿಗಾಗಿ, ಜನರಿಗೋಸ್ಕರ ಬದುಕಿದವರು ತಮ್ಮ ತಂದೆ ಎಂದರು.
ಮುಟ್ಟಿ-ತಟ್ಟಿ ಎಂಬ ಅನಿಷ್ಠ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ತಮ್ಮ ಸಮುದಾಯದ ಹಿರಿಯರನ್ನು ಸಮಾಜವನ್ನೇ ಎದುರು ಹಾಕಿಕೊಂಡು ಹೋರಾಟ ಮಾಡಿದ ತಮ್ಮ ತಂದೆ, ತಮ್ಮ ದೀಕ್ಷಾ ಗುರು ಚನ್ನಬಸವಪಟ್ಟದ್ದೇವರ ಮನವೊಲಿಸಿ ಅಶೋಕ ನಗರದ ನಿವಾಸಿಗಳನ್ನು ಭಾಲ್ಕಿ ಮಠಕ್ಕೆ ಕರೆತಂದು ಸ್ನಾನ ಮತ್ತು ವಿಭೂತಿ ಧಾರಣೆ ಮಾಡಿಸಿ, ಭಾಲ್ಕೇಶ್ವರ ದೇವಾಲಯದ ಸಿಹಿನೀರ ಬಾವಿಯಿಂದ ನೀರು ಸೇದಿಸಿ ಕುಡಿಸುವ ಮೂಲಕ ಕ್ರಾಂತಿಯನ್ನೇ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡರು.
102 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದ್ರಾಬಾದ್ ಕರ್ನಾಟಕದ ವಿಮೋಚನೆಗಾಗಿ, ಏಕೀಕರಣಕ್ಕಾಗಿ ಹೋರಾಡಿದ್ದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ಬೀದರ್ ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದ್ದರು. ನಿಷ್ಠುರವಾದಿಗಳಾಗಿದ್ದ ಅವರು ಅನ್ಯಾಯ ಕಂಡರೆ ತಮ್ಮವರು, ಅನ್ಯರು ಎಂಬ ಭೇದವಿಲ್ಲದೆ ಪ್ರತಿಭಟಿಸುತ್ತಿದ್ದರು, ಅಸಹಾಯಕರಿಗೆ ನ್ಯಾಯ ಕೊಡಿಸುತ್ತಿದ್ದರು ಎಂದರು.
ರೈತರಿಗೆ ಬೆಳೆ ನಷ್ಟವಾದಾಗ, ಬೆಂಕಿ ಮಳೆಯಿಂದ ನಷ್ಟ ಸಂಭವಿಸಿದಾಗ ಸರ್ಕಾರದ ವಿರುದ್ಧವೇ ಹೋರಾಟ ಮಾಡಿ ಪರಿಹಾರ ಕೊಡಿಸಿದ್ದರು. ಶರಣರ ಬಗ್ಗೆ ಅವಮಾನಕರ ರೀತಿಯಲ್ಲಿ ಮತ್ತು ಸಮಾಜದ ಜನರ ಭಾವನೆಗೆ ಧಕ್ಕೆ ಬರುವಂತೆ ಕೆಲವು ಕೃತಿಗಳಲ್ಲಿ ತಿರುಚಿ ಬರೆದಾಗ ಅದರ ವಿರುದ್ಧ ಹೋರಾಟ ಮಾಡಿ ಕೃತಿಯನ್ನೇ ಮುಟ್ಟುಗೋಲು ಹಾಕಿಸಿದ್ದರು. ಹಾವನೂರು ಆಯೋಗದ ವರದಿಯ ವಿರುದ್ಧ ಸದನದ ಒಳಗೆ ಹೊರಗೆ ಹೋರಾಟ ಮಾಡಿದ್ದರು. ಅವರ ಬದ್ಧತೆ, ನ್ಯಾಯಪರತೆ, ಬಡಜನರ ಪರ ಕಾಳಜಿ ಎಲ್ಲರಿಗೂ ಆದರ್ಶ ಎಂದರು.
ಜಿಲ್ಲೆಯಲ್ಲಿ ಕಾರ್ಯಗತವಾಗಿರುವ ನೀರಾವರಿ ಯೋಜನೆಗಳೇ ಇರಲಿ, ಮೂಲಭೂತಸೌಕರ್ಯ ಯೋಜನೆಗಳೇ ಇರಲಿ ಅದರಲ್ಲಿ ತಮ್ಮ ತಂದೆಯವರ ಶ್ರಮ ಇದೆ. ಹೀಗಾಗಿಯೇ ತಮ್ಮ ತಂದೆಗೆ ಲೋಕನಾಯಕ ಎಂಬ ಬಿರುದನ್ನು ಪೂಜ್ಯ ಚೆನ್ನಬಸವ ಪಟ್ಟದ್ದೇವರು ನೀಡಿದ್ದರು ಎಂದರು.
ಛಲವಾದಿ ಭೀಮಣ್ಣ-ಗುರುಬಸವ ಪಟ್ಟದ್ದೇವರು ಬಣ್ಣನೆ: ಭೀಮಣ್ಣ ಖಂಡ್ರೆ ಅವರು ಛಲವಾದಿಗಳಾಗಿದ್ದರು. ಛಲಬೇಕು ಶರಣಂಗೆ ಎಂಬುದಕ್ಕೆ ಅನ್ವರ್ಥವಾಗಿದ್ದರು. ಅವರು ಗುಡುಗಿದರೆ ವಿಧಾನಸೌಧವೇ ನಡುಗುತ್ತಿತ್ತು. ಅನ್ಯಾಯದ ವಿರುದ್ಧ ಅವರು ಸದಾ ಸಿಡಿದು ನಿಂತು ನೊಂದವರಿಗೆ ನ್ಯಾಯಕೊಡಿಸುತ್ತಿದ್ದರು ಎಂದರು.
ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಭೀಮಣ್ಣ ಖಂಡ್ರೆ ಅವರ ಕೊಡುಗೆ ಅಪಾರವಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಹಿಂದುಳಿದ ಬೀದರ್ ಭಾಗದ ಯುವಜನರು ಎಂಜಿನಿಯರಿಂಗ್ ಶಿಕ್ಷಣ ದೊರಕಿಸುವಲ್ಲಿ ಅವರ ಶ್ರಮ ಅಪರಿಮಿತವಾದ್ದು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಸ್ವಂತ ಕಚೇರಿಯೂ ಇರಲಿಲ್ಲ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ಭೂಮಿ ಖರೀದಿಸಿ, ಭವ್ಯ ಕಟ್ಟಡ ನಿರ್ಮಿಸಿ, ಸಮಾಜ ಸಂಘಟಿಸಿ ಗಟ್ಟಿಗೊಳಿಸಿದ ಕೀರ್ತಿಯೂ ಭೀಮಣ್ಣ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಗುರುಮಠಕಲ್ ನಲ್ಲಿ ಖಂಡ್ರೆ ಅವರಿಗೆ ಶ್ರದ್ಧಾಂಜಲಿ: ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ವೀರಶೈವ ಲಿಂಗಾಯತ ಸಮಾಜದದಿಂದ ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ಸಮಾಜ ಪ್ರಮುಖರು, ಯುವಕರು ಭಾಗವಹಿಸಿದ್ದರು.
