ಬೀದರ:  ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸಬಲೀಕರಣಗೊಂಡು ಮುಂದೆ ಬರಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಕರೆ ನೀಡಿದರು.

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಸಂಯುಕ್ತಾಶ್ರಯದಲ್ಲಿ ನೀತಿ ಆಯೋಗ ಸಂಪೂರ್ಣತಾ ಅಭಿಯಾನದ ಸಂಪನ್ನ ಸಮಾರೋಪ ಕಾರ್ಯಕ್ರಮ ಮಹತ್ವಾಕಾಂಕ್ಷಿ ತಾಲ್ಲೂಕುಗಳು ಔರಾದ(ಬಿ), ಕಮಲನಗರ, ಹುಮನಾಬಾದ, ಚಿಟಗುಪ್ಪಾ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆ ಅಡಿಯಲ್ಲಿ ಸಮುದಾಯ ಬಂಡವಾಳ ನಿಧಿ ಹಾಗೂ ಸುತ್ತು ನಿಧಿ ಚೆಕ್ ವಿತರಣೆ ಸಮಾವೇಶ  ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕೃಷಿ ಚಟುವಟಿಕೆ, ಗೃಹ ಉದ್ಯೋಗ, ಗುಡಿ ಕೈಗಾರಿಕೆ ಕರಕುಶಲ ವಸ್ತುಗಳ ಉದ್ಯೋಗದಿಂದ ಗ್ರಾಮೀಣ ಮಹಿಳೆಯರು ಉತ್ತಮ ಮಾರುಕಟ್ಟೆ ದೊರಕಿಸಿಕೊಂಡು ಸ್ವಾವಲಂಬಿಗಳಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಆರ್ಥಿಕ ಆದಾಯ ಹೆಚ್ಚಿಸಿಕೊಂಡು ಬಲಿಷ್ಠರಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ನಮ್ಮದು ನುಡಿದಂತೆ ನಡೆದ ಸರಕಾರ, 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಕೋಟ್ಯಾಂತರ ಮಹಿಳೆಯರಿಗೆ ಸಹಾಯ ಮಾಡಲಾಗಿದೆ. ದಲ್ಲಾಳಿಗಳು ಇಲ್ಲದೇ, ಭ್ರಷ್ಟಾಚಾರ ಇಲ್ಲದೇ ಪಾರದರ್ಶಕವಾಗಿ ನೇರವಾಗಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಅನುದಾನ ತಲುಪುತ್ತಿದೆ. ರಾಜ್ಯದ ಮಹಿಳೆಯರಿಗೆ ಸರಕಾರ ಶಕ್ತಿ ನೀಡಿದೆ ಎಂದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರವು ಮಹಿಳಾ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2 ಸಾವಿರ ಎಸ್.ಎಚ್.ಜಿ.ಗಳಿಗೆ ಸ್ವಯಂ ಉದ್ಯೋಗಕ್ಕೆ ಆದಾಯ ತರುವ ಚಟುವಟಿಕೆಗೆ ತರಬೇತಿ, ಬ್ಯಾಂಕ್ ಸಾಲ, ಬಂಡವಾಳ, ಸುತ್ತು ನಿಧಿ ನೀಡಿ ಆರ್ಥಿಕ ಸಮೃದ್ಧಿಯ ಬದಲಾವಣೆ ತರಲಾಗುತ್ತಿದೆ ಎಂದರು.

ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ಮಹಿಳೆಯರು ಉತ್ಪನ್ನಗಳಿಗೆ ಬ್ರಾಂಡಿಂಗ್ ಅತೀ ಮಹತ್ವವಾಗಿದೆ. ಮಾರುಕಟ್ಟೆಯಲ್ಲಿ ಬ್ರಾಂಡಿಂಗ್ ದೊರಕಿಸಿಕೊಂಡು ಆರ್ಥಿಕವಾಗಿ ಸದೃಢವಾಗುವಂತೆ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅನುದಾನದಡಿ ಒಟ್ಟು 9715 ಸ್ವಸಹಾಯ ಗುಂಪುಗಳೊಂದಿಗೆ 8889 ಮಹಿಳೆಯರನ್ನು ಜೀವನೋಪಾಯ ಅಭಿಯಾನದಡಿ ಸದೃಢಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈವೆರೆಗೆ 2500 ಕ್ಕೂ ಕಿರು ಹಾಗೂ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸಲಾಗಿದೆ. ಪ್ರಸಕ್ತ 2024-25ನೇ ಸಾಲಿನಲ್ಲಿ 546 ಗುಂಪುಗಳಿಗೆ 8.96 ಕೋಟಿ ಬಿಡುಗಡೆಯಾಗಿದ್ದು ಪ್ರತಿ ಗುಂಪಿಗೆ 1.50 ಲಕ್ಷ ಬಂಡವಾಳ ನಿಧಿ ನೀಡಲಾಗುತ್ತಿದೆ. 216 ಗುಂಪುಗಳಿಗೆ 43 ಲಕ್ಷ ಸುತ್ತು ನಿಧಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 8 ಸ್ವ-ಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ಚೆಕ್ ವಿತರಣೆ, 4 ಸ್ವ-ಸಹಾಯ ಗುಂಪುಗಳಿಗೆ ಸುತ್ತು ನಿಧಿ ಚೆಕ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ನಗರಸಭೆ ಅಧ್ಯಕ್ಷರಾದ ಎಂ.ಡಿ.ಗೌಡ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಕಮಲನಗರ, ಔರಾದ, ಹುಮನಾಬಾದ, ಚಿಟ್ಟಗುಪ್ಪಾ ತಾಲ್ಲೂಕ ಪಂಚಾಯತ ಇಓಗಳು ಸೇರಿದಂತೆ ವಿವಿಧ ಸ್ವ-ಸಹಾಯ ಸಂಘದ ಸದಸ್ಯರು, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!