ಅತಿ ಹೆಚ್ಚು ಸ್ವಚ್ಚತೆಗೆ ಆದ್ಯತೆ ಕೊಟ್ಟ 3 ಗ್ರಾಮಕ್ಕೆ ವೈಯಕ್ತಿಕ ಬಹುಮಾನ  ಘೋಷಣೆ

ಬೀದರ: ಪರಿಸರ ಸ್ವಚ್ಚವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ. ನಮ್ಮ ಮನೆಯಿಂದಲೇ ಸ್ವಚ್ಚತೆ ಆರಂಭಿಸೋಣ ಎಂದು ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯ ವ್ಯಪ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ, ಸ್ವಚ್ಛ ಭಾರತ ಮಿಷನ್ (ಗ್ರಾ) ಜಿಲ್ಲಾ ಪಂಚಾಯತ  ವತಿಯಿಂದ ನಗರದ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನ.19 ರಿಂದ ಡಿ.10 ರವರೆಗೆ ನಡೆಯುವ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನೆಗೆ ಶೌಚಾಲಯ ಅತಿ ಮುಖ್ಯವಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯ ಅಥವಾ ಸ್ವಂತ ಹಣದಿಂದಾಗಲಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಿಸಿಕೊಂಡು ಆರೋಗ್ಯವಂತರಾಗಬೇಕೆಂದರು. ಡಿ. 10 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ 185 ಗ್ರಾಮ ಪಂಚಾಯತಿಗಳಲ್ಲಿ ಯಾವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಗ್ರಾಮ ಅತಿ ಹೆಚ್ಚು ಸ್ವಚ್ಚತೆಗೆ ಆದ್ಯತೆ ಕೊಡುತ್ತಿರಿ ಅಂತಹ ಗ್ರಾಮ ಪಂಚಾಯತಿ 3 ಗ್ರಾಮಗಳಿಗೆ ವೈಯಕ್ತಿಕ ಬಹುಮಾನ ನೀಡುವುದಾಗಿ ಘೋಷಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಯಲು ಮಲ ವಿಸರ್ಜನೆಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ಬಯಲು ಸ್ವಚ್ಛ ಮುಕ್ತ ಮಾಡಲು ನಾವೆಲ್ಲರೂ ಪಣ ತೋಡೋಣ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರಗತಿ ಸಾಧಿಸಲಾಗಿದ್ದು, 2 ಲಕ್ಷ 25 ಸಾವಿರ 826 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೌಚಾಲಯ ಕಟ್ಟುವುದರ ಜೊತೆಗೆ ಬಳಕೆ ಮಾಡುವ ಕುರಿತು ಗ್ರಾಮ ಪಂಚಾಯತಗಳಿಂದ ಅರಿವು ನೀಡಲಾಗಿದೆ.

ಆರೋಗ್ಯದಾಯಕ ಜೀವನ, ರೋಗ ಮುಕ್ತ ಮಾಡಲು ಅನುಕೂಲವಾಗಲಿದೆ. ಜಿಲ್ಲೆಯ 185 ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ಕಸ ವಿಲೇಮಾರಿ ಮಾಡುವ ವಾಹನ ನೀಡಲಾಗಿದ್ದು, ಪ್ರತಿ ಮನೆಗೆ ಕೂಡ ಹಸಿ ಕಸ, ಒಣ ಕಸ ವಿಂಗಡಿಸಲು 2 ಬುಟ್ಟಿಗಳನ್ನು ನೀಡಲಾಗಿದೆ.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚ ಸಂಕೀರ್ಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. 185 ಮಹಿಳಾ ಚಾಲಕರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಇದರಿಂದ ಮಹಿಳಾ ಶಶಕ್ತಿಕರಣಕ್ಕೆ ಉತ್ತೇಜನ ನೀಡಲಾಗುತ್ತದೆ. 71 ಸ್ವಚ್ಚ ಸಂಕೀರ್ಣ ಪೂರ್ಣವಾಗಿದ್ದು, 114 ಘಟಕ ಪ್ರಗತಿಯಲ್ಲಿದೆ. 597 ಡಿಪಿಆರ್‌ಗಳನ್ನು ಸಿದ್ಧಪಡಿಸಲಾಗಿದ್ದು ಅನುಮೋದನೆ ಪಡೆದು 47 ಕಾಮಗಾರಿ ಪೂರ್ಣಗೊಂಡಿದೆ.

ಬಾಕಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಮಲತ್ಯಾಜ್ಯ ನಿರ್ವಹಣೆ ಕೂಡ ಎಫ್‌ಎಸ್‌ಎಂ ಘಟಕಗಳು ನಿರ್ಮಿಸುವ ಕಾಮಗಾರಿಗಳ ಚಾಲನೆಯಲ್ಲಿವೆ. ಸಮುದಾಯ ಶೌಚಾಲಯ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 20 ಕಾಮಗಾರಿಗಳು ಮುಗಿದಿದ್ದು ಬಾಕಿ ಕಾಮಗಾರಿಗಳು ಚಾಲ್ತಿಯಲ್ಲಿರುತ್ತವೆ. ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಇನ್ನಿತರ ಕಾಮಗಾರಿಗಳ ಚಾಲ್ತಿಯಲ್ಲಿವೆ.

ನವೆಂಬರ್.19 ರಿಂದ ಡಿಸೆಂಬರ್ 10 ರವರೆಗೆ ನಡೆಯುವ ಈ ವಿಶೇಷ ಆಂದೋಲನಕ್ಕೆ ಎಲ್ಲರೂ ಸಹಕರಿಸಬೇಕು. ಡಿ.10 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮವಾಗಿ ಸ್ವಚ್ಚತೆ ನಿರ್ವಹಿಸಿದ ಗ್ರಾಮ ಪಂಚಾಯತಿಗಳಿಗೆ ಸ್ವಚ್ಛತಾ ಸಿಬ್ಬಂದಿ, ಪಿಡಿಓ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೆ.14 ರಿಂದ ಅ.2 ರವರೆಗೆ ಸ್ವಚ್ಚತಾ ಸೇವಾ ಆಂದೋಲನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹುಮನಾಬಾದ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೀಪಿಕಾ ಬಿ.ನಾಯಕ ಹಾಗೂ ಸ್ವಚ್ಚತಾ ಸಿಪಾಯಿಗಳಿಗೆ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಗ್ರಾಮೀಣ ಕುಡಿಯುವ ನೀರು ಘಟಕದ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗಪ್ಪ ಬಿರಾದಾರ, ಜಿಲ್ಲಾ ಪಂಚಾಯತ ಪಿಡಿಓ ಜಗನ್ನಾಥ ಮೂರ್ತಿ, ಜಿಲ್ಲೆಯ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ ಪಿಡಿಓ ಗಳು, ಸ್ವಚ್ಚ ಭಾರತ ಮಿಷನ್ ವಿಶೇಷ ನೋಡಲ್ ಅಧಿಕಾರಿಗಳಾದ ಗೌತಮ ಅರಳಿ, ಐಇಸಿ ಸಮಾಲೋಚಕರಾದ ಪಂಡಿತ ವಾಡೇಕರ, ಎಸ್‌ಎಸ್‌ಜಿ ಸ್ವಚ್ಚತಾ ಮಹಿಳೆಯರು, ಗ್ರಾಮ ಪಂಚಾಯತ ಅಧ್ಯಕ್ಷರು ಸೇರಿದಂತೆ ಜಿಲ್ಲಾ ಪಂಚಾಯತ, ತಾಲ್ಲೂಕ ಪಂಚಾಯತ, ಗ್ರಾಮ ಪಂಚಾಯತ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!