ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಪ್ರಸಾದ ಯೋಜನೆಯ ಕಾಮಗಾರಿ | ಸಚಿವ ಈಶ್ವರ ಖಂಡ್ರೆ ಅವರಿಂದ ಚಾಲನೆ | ಸಚಿವ ರಹೀಂ ಖಾನ್, ಸಂಸದ ಸಾಗರ ಖಂಡ್ರೆ ಸೇರಿ ಗಣ್ಯರು ಭಾಗಿ

ಬೀದರ: ಪಾಪನಾಶ ದೇವಾಲಯ ಅಭಿವೃದ್ಧಿಯಾಗಬೇಕು ಎನ್ನುವುದು ಬೀದರ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿತ್ತು, ಅದು ಸಂಸದ ಸಾಗರ ಖಂಡ್ರೆ ಅವರ ಸತತ ಪ್ರಯತ್ನದಿಂದ ಈಡೇರಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಶನಿವಾರ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಬೀದರ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಪ್ರಸಾದ ಯೋಜನೆಯಡಿಯಲ್ಲಿ 22.41 ಕೋಟಿ ರೂ. ವೆಚ್ಚದಲ್ಲಿ ಬೀದರ ಜಿಲ್ಲೆಯ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

2024ರ ಮಾರ್ಚ್ ನಲ್ಲಿ ಈ ಕಾಮಗಾರಿ ಘೋಷಣೆಯಾಗಿ ಪ್ರಧಾನಿಯವರಿಂದ ವರ್ಚವಲ್ ಮೂಲಕ ಶಂಕುಸ್ಥಾಪನೆಯಾಗಿತ್ತು. ಆದರೆ ಯಾವುದೇ ಪ್ರಗತಿಯಾಗಿರಲಿಲ್ಲ. ಸಾಗರ ಖಂಡ್ರೆ ಸಂಸದರಾದ ಮೇಲೆ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ನಿರಂತರ ಭೇಟಿ ಮಾಡಿ ಹಣ ಮಂಜೂರಾತಿ ಮಾಡಿಸಿದ್ದಾರೆ ನಂತರ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಆಗಿ ಈಗ ಕಾಮಗಾರಿ ಪ್ರಾರಂಭವಾಗುತ್ತಿದೆ. ಕಾಮಗಾರಿಯೂ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.ದೇವಸ್ಥಾನಗಳ ಮೇಲೆ ಜನರ ಸಾಕಷ್ಟು ನಂಬಿಕೆ ಇದೇ ಶಿವರಾತ್ರಿ ಸಮಯದಲ್ಲಿ ಪಾಪನಾಶ ದೇವಾಲಯಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ದೇವಸ್ಥಾನದ ಜೀರ್ಣೋದ್ಧಾರದಿಂದ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ 10 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ವಿಮಾನಯಾನಕ್ಕೆ ಮರುಚಾಲನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ ಎಂದರು.

ಪೌರಾಡಳಿ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಮಾತನಾಡಿ, ಯಾರೇ ಅಭಿವೃದ್ಧಿ ಮಾಡಲಿ ಒಟ್ಟಿನಲ್ಲಿ ಬೀದರ ಅಭಿವೃದ್ಧಿಯಾಗಬೇಕು. ನಮ್ಮ ಇಲಾಖೆಯಿಂದ ಪಾಪನಾಶ ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿ ನೀಡಿದ್ದೇನೆ ಜೊತೆಗೆ ಬೀದರ ಕೋಟೆ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿ ಹಾಗೂ ಕೆರೆ ಅಭಿವೃದ್ಧಿಗಾಗಿ 50 ಕೋಟಿ ಮಿಸಲೀಟ್ಟಿದ್ದೇನೆ. ಈಗಾಗಲೇ 100 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ರಸ್ತೆ ಚರಂಡಿ ಕಾಮಗಾರಿ ನಡೆಯಲಿವೆ ಎಂದರು.

ಸಂಸದ ಸಾಗರ ಖಂಡ್ರೆ ಮಾತನಾಡಿ, ಐತಿಹಾಸಿಕ ಪಾಪನಾಶ ದೇವಸ್ಥಾನದ ಅಭಿವೃದ್ಧಿಗೆ ಪ್ರಸಾದ ಯೋಜನೆಯಡಿ ತಾವು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಅನುದಾನ ಬಿಡುಗಡೆಗಾಗಿ ವಿನಂತಿಸಿದ ನಂತರ ಸಚಿವರು ಅನುದಾನ ಬಿಡುಗಡೆ ಮಾಡಿದ್ದಾರೆ. ಈಗ ನನ್ನ ಕ್ಷೇತ್ರದ ಜನತೆಯ ಪರವಾಗಿ ಸಂಸದರಾಗಿ 22.41 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಅಭಿವೃದ್ಧಿಯ ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಯಾರು ಸಹ ಧಾರ್ಮಿಕ ಕಾರ್ಯಕ್ರಮಗದಲ್ಲಿ ರಾಜಕೀಯ ತರಬಾರದು. ಪಾಪನಾಶ ದೇವಸ್ಥಾನ ಅಭಿವೃದ್ಧಿಗೆ ಅಲ್ಲದೇ ಜಿಲ್ಲೆಯ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನು ಸಹ ಅಭಿವೃದ್ಧಿ ಮಾಡಲಾಗುವುದೆಂದರು.

ಬಡಜನರಿಗಾಗಿ ತಾವು ಈಗಾಗಲೇ 50 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 100 ಕೋಟಿ ರೈಲ್ವೆ ಕಾಮಗಾರಿ ನಡೆಯುತ್ತಿದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ತಾವು ಬದ್ಧರಾಗಿದ್ದೇವೆ ಎಂದರು. ಪಾಪನಾಶ ಮಂದಿರದ ಪರಿಸರದಲ್ಲಿ ಜಾತ್ರಾ ಸಂಕೀರ್ಣ ನಿರ್ಮಾಣ, ಕೆರೆ ಮತ್ತು ಸುತ್ತಲಿನ ಪ್ರದೇಶ ಕಾಮಗಾರಿ, ಅನ್ನದಾಸೋಹ ಕಟ್ಟಡ, ಯಾತ್ರಿಕರ ವಿಶ್ರಾಂತಿ ತಾಣ, ಸಾಂಸ್ಕೃತಿಕ ಮತ್ತು ಮನೋರಂಜನಾ ಕೇಂದ್ರ, ಪಾರ್ಕಿಂಗ್ ಪ್ರದೇಶ ಅಭಿವೃದ್ಧಿ, ರಸ್ತೆಗಳ ಹಾಗೂ ಪಾದಚಾರಿ ಮಾರ್ಗಗಳು, ಮುಖ್ಯ ಪ್ರವೇಶ ದ್ವಾರ ಹಾಗೂ ವಿವಿಧ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ಮಾತನಾಡಿ, ಸಾಗರ ಖಂಡ್ರೆಯವರು ಕಷ್ಟಪಟ್ಟು ಅನುಧಾನ ತಂದು ನಂತರ ಟೆಂಡರ್ ಮಾಡಿಸಿ ಕಾಮಗಾರಿ ಪ್ರಾರಂಭಿಸಿದ್ದಾರೆ. ನಾವೆಲ್ಲರೂ ಸೇರಿ ಅವರಿಗೆ ಸಹಕಾರ ನೀಡಿದಾಗ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಶಕ್ತಿ ನೀಡಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾಲಾ ನಾರಾಯಣರಾವ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬೀದರ ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಬೀದರ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಹೆಚ್ಚುವಾರಿ ಎಸ್.ಪಿ. ಚಂದ್ರಕಾಂತ್ ಪೂಜಾರಿ, ಬೀದರ ಸಹಾಯಕ ಆಯುಕ್ತ ಮೊಹ್ಮದ್ ಶಕೀಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ, ಹಣಮಂತರಾವ್ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!