ಕಬ್ಬು ಬೆಲೆ ನಿಗದಿ ಸಭೆ | ಪ್ರತಿ ಟನ್‌ಗೆ ರೂ. 100 ಹೆಚ್ಚುವರಿ ನೀಡುವಂತೆ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ

ಬೀದರ : ಕಬ್ಬು ದರ ಹೆಚ್ಚಳ ಹಾಗೂ ಬೆಲೆ ನಿಗದಿ ಕುರಿತಂತೆ ಇಂದು ಜಿಲ್ಲಾಡಳಿತದ ಸಭಾಂಗಣದಲ್ಲಿ ಆಯೋಜಿಸಲಾದ ರೈತ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಈ ಬಾರಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ. 100 ಹೆಚ್ಚು ದರ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಕನಿಷ್ಟ 3 ಸಾವಿರ ಪ್ರತಿ ಟನ್‌ಗೆ ನೀಡುವಂತೆ ರೈತ ಸಂಘದ ಪದಾಧಿಕಾರಿಗಳು ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರ ಸಮಸ್ಯೆಗಳನ್ನು ಸಹ ಆಲಿಸಿದ ಸಚಿವರು ಈ ಬಾರಿ ಸಕ್ಕರೆ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆ ಯಾಗಿದ್ದು, ಮೊಲಾಸಿಸ್ ಬೆಲೆ ಸಹ ಕಡಿಮೆಯಾಗಿದ್ದು, ಕಬ್ಬು ಕಟಾವು ಬೆಲೆ ಸಹ ಹೆಚ್ಚಾಗಿರುವುದನ್ನು ತಿಳಿಸಿದರು.

ಸಕ್ಕರೆ ಕಾರ್ಖಾನೆ ಹಾಗೂ ರೈತರು ಒಂದೇ ನಾಣ್ಯದ ಎರಡು ಮುಖವಿದ್ದಂತೆ, ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆ ಗಳು ಕಳೆದ ಸಾಲಿನ ಬೆಲೆಗಿಂತ ಪ್ರತಿ ಟನ್‌ಗೆ ರೂ. 100 ಹೆಚ್ಚು ಬೆಲೆ ನೀಡುವಂತೆ ಸಚಿವರು ಕಾರ್ಖಾನೆ ಅಧ್ಯಕ್ಷರಿಗೆ ತಿಳಿಸಿದರು. ಕಳೆದ ಬಾರಿ 2600 ರೂ. ದರ ನೀಡಿದ್ದು ಈ ಬಾರಿ 2700 ರೂ. ನೀಡಲು ಸಚಿವರು ತಿಳಿಸಿದರು.

ಕಬ್ಬು ಸಾಗಾಟ ಮಾಡಿದ ರೈತರಿಗೆ ಕಾರ್ಖಾನೆಗಳು ಕಡ್ಡಾಯವಾಗಿ 15 ದಿನಕ್ಕೊಮ್ಮೆ ಹಣ ಪಾವತಿಸುವಂತೆ ಸಚಿವರು ಸೂಚಿಸಿದರು. ಆಕಸ್ಮಿಕ ಬೆಂಕಿ ತಗುಲಿದ ಕಬ್ಬು ಬೆಳೆಯನ್ನು ಆದ್ಯತೆ ಮೇರೆಗೆ ಕಟಾವು ಮಾಡಿ ಸಾಗಿಸುವಂತೆಯೂ ಸಚಿವರು ಕಾರ್ಖಾನೆಗಳಿಗೆ ಸೂಚಿಸಿದರು.

ತೊಗರಿ ನಷ್ಟಕ್ಕೆ ಸಮೀಕ್ಷೆ: ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಹೂ, ಕಾಯಿ ಹಾನಿಯಾದ ಕುರಿತು ರೈತರು ಮನವಿ ನೀಡಿದ ಹಿನ್ನೆಲೆಯಲ್ಲಿ ರೈತರ ಹೊಲಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರಿಗೆ ತಿಳಿಸಿದರು.

ಜಿಲ್ಲೆಯ 70 ಕಡೆ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಶೀಘ್ರವೇ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಇನ್ನೂ ಹೆಚ್ಚಿನ ಖರೀದಿ ಕೇಂದ್ರಗಳ ಅಗತ್ಯವಿದ್ದಲ್ಲಿ ಸ್ಥಾಪಿಸಲಾಗುವುದೆಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರಾದ ಪ್ರವಿಣ ಬರಗಲ್, ನಾರಾಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ, ಭಾಲ್ಯೇಶ್ವರ ಬೀದರ ಕಿಸಾನ, ಭವಾನಿ ಶುಗರ, ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆ ಯ ಮುಖ್ಯಸ್ಥರು ಸೇರಿದಂತೆ ರೈತ ಮುಖಂಡರಾದ ಮಲ್ಲಿಕಾ ರ್ಜುನ ಸ್ವಾಮಿ, ಕಾಶಿನಾಥ ಮಲಶೆಟ್ಟಿ, ಖಾಸಿಂ ಅಲಿ, ವಿಠಲರಾವ ಮೇತ್ರೆ, ಸೋಮನಾಥ ಬಣಕೂರ, ಸತೀಶ ನ್ನಾರೆ, ನಾಗನಾಥ ಪಾಟೀಲ, ಕರಬಸಪ್ಪ ಹುಡಗಿ, ಶಾಂತಮ್ಮ ಮಾಲಗೆ, ರಾಮರಾವ, ವಿಠಲರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!