ಕನ್ನಡ, ಉರ್ದು ಮಾಧ್ಯಮದ 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ | ಪ್ರಸಕ್ತ ಸಾಲಿನಿಂದಲೇ ಮಕ್ಕಳಿಗೆ ಲಾಭ

ಬೀದರ: ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ‘ಶಾಹೀನ್ ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇತನ’ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.

ಈ ವರ್ಷ ಸಮೂಹದ ಕಲ್ಯಾಣ ಕರ್ನಾಟಕ ಭಾಗದ ಒಂಬತ್ತು ಪದವಿ ಪೂರ್ವ ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಒಟ್ಟು 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಬೀದರನ ಮುಖ್ಯ ಶಾಖೆಯಲ್ಲಿ 75, ಕಲಬುರಗಿ ಶಾಖೆಯಲ್ಲಿ 35, ರಾಯಚೂರು, ಬಳ್ಳಾರಿ, ಯಾದಗಿರಿ, ಔರಾದ್, ಬಸವಕಲ್ಯಾಣ, ಚಿಟಗುಪ್ಪ ಹಾಗೂ ಹುಮನಾಬಾದ್ ಶಾಖೆಗಳಲ್ಲಿ ತಲಾ 20 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು ಎಂದು ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಸಮೂಹದ ಆಯಾ ಶಾಖೆಗಳಲ್ಲಿ ಅಥವಾ ಆನ್‍ಲೈನ್‍ನಲ್ಲಿ (www.shaheengroup.org) ಮೇ 15 ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಮೇ 18 ರಂದು ಆಯಾ ಶಾಖೆಗಳಲ್ಲಿ ಸಂದರ್ಶನ ನಡೆಯಲಿದೆ. ಅರ್ಹತೆ ಆಧಾರದಲ್ಲಿ ಆಯ್ಕೆ ಜರುಗಲಿದೆ. ಗ್ರಾಮೀಣ ಭಾಗದ, ಅಂಗವಿಕಲ ಹಾಗೂ ಅನಾಥ ಮಕ್ಕಳಿಗೆ ವಿಶೇಷ ಆದ್ಯತೆ ಕೊಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಕಾಲೇಜು ಶುಲ್ಕದಲ್ಲಿ ಶೇ 75 ರಷ್ಟು ರಿಯಾಯಿತಿ ಸಿಗಲಿದೆ ಎಂದು ಹೇಳಿದ್ದಾರೆ.

ಶಾಹೀನ್ ಕಾಲೇಜಿನ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಹಾಗೂ ಸಾಧನೆ ಪ್ರಮಾಣ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಶೇ 13 ರಷ್ಟು ಹೆಚ್ಚಿದೆ. ಉರ್ದು ಮಾಧ್ಯಮ ವಿದ್ಯಾರ್ಥಿಗಳು ಮೂರನೇ ಸ್ಥಾನದಲ್ಲಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸಲು ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಶಿಷ್ಯವೇತನದ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಶಿಷ್ಯ ವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964763018 (ಬೀದರ್ ಮುಖ್ಯ ಕಚೇರಿ), 7666048172 (ಕಲಬುರಗಿ ಶಾಖೆ), 9916149428 (ಔರಾದ್), 9845058018 (ಬಸವಕಲ್ಯಾಣ), 8971222784 (ಚಿಟಗುಪ್ಪ), 7026951056 (ಹುಮನಾಬಾದ್), 9880539999 (ರಾಯಚೂರು), 9986670286 (ಯಾದಗಿರಿ) ಅಥವಾ 8553165562 (ಬಳ್ಳಾರಿ ಶಾಖೆ)ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!