ಅನುಭವ ಮಂಟಪದ ಗ್ಯಾಲರಿಯಲ್ಲಿ 7ಡಿ ತಂತ್ರಜ್ಞಾನ ಬಳಸಿ ಶರಣರ ಸಂವಾದ ಮತ್ತು ಸಂಭಾಷಣೆ ಹಾಗೂ ವಚನಕಾರರ ಚರಿತ್ರೆಯ ಪ್ರಾತ್ಯಕ್ಷಿತೆ
ಬೀದರ: ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ-ಸಹಯೋಗದಲ್ಲಿ ಬಸವಕಲ್ಯಾಣದಲ್ಲಿ ಎರಡು ದಿನದ ಕಾರ್ಯಾಗಾರದಲ್ಲಿ ನೆರವೇರಿತು.
12ನೇ ಶತಮಾನದ ಶರಣರ ಜೀವನ ಪರಿಚಯ ಕುರಿತು ಕಥಾಲೇಖನ ಹಾಗೂ ಶರಣರ ವಚನಗಳ ಪರಿಷ್ಕೃತ ಆವೃತ್ತಿಗಳನ್ನು ಒಳಗೊಂಡ ಸಾಹಿತ್ಯವನ್ನು ಸಿದ್ಧಪಡಿಸಲು ಸಂಪನ್ಮೂಲ ವ್ಯಕ್ತಿಗಳ ಮೂಲಕ ಕಾರ್ಯನಿರ್ವಹಿಸುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಅನುಭವ ಮಂಟಪದ ನೀಲನಕ್ಷೆ ಸಿದ್ಧಪಡಿಸಿ ಕಾರ್ಯಗತಗೊಳಿಸುತ್ತಿರುವ ವೈದ್ಯ ಡಾ. ಬಾಬಾಸಾಹೇಬ ಗಡ್ಡೆ ವಚನ ಸಾಹಿತ್ಯ ತಜ್ನ್ಯ ಡಾ. ಶಶಿಕಾಂತ ಪಟ್ಟಣ ಡಾ. ಜಯಶ್ರೀ ಪಟ್ಟಣ ಅವರು ಎಲ್ಲ ಸದಸ್ಯರಿಗೆ ಹೊಸ ಅನುಭವ ಮಂಟಪದ ವೀಕ್ಷಣೆ ಮತ್ತು ವಿವರಣೆಯನ್ನು, ಶರಣರ ತತ್ವ ಸಿದ್ಧಾಂತದೊಂದಿಗೆ ಮತ್ತು ಹೊಸ ಕಾರ್ಯತಂತ್ರಜ್ಞತೆಯೊಂದಿಗೆ ಹೇಗೆ ರೂಪುಗೊಳ್ಳುತ್ತಿದೆ ಎನ್ನುವುದನ್ನು ಸಮರ್ಪಕವಾಗಿ, ಕೂಲಂಕುಷವಾಗಿ, ಹಂಚಿಕೊಂಡರು.
ಡಾ. ಪಟ್ಟಣ ಅವರು ಅನುಭವ ಮಂಟಪದಲ್ಲಿ ಶರಣರ ಚರಿತ್ರೆ ರಚನೆ ಕುರಿತು ವಿವರವಾಗಿ ತಿಳಿಸಿದರು. ಡಾ ಗಡ್ಡೆ ಅವರು ಶರಣರ ಕುರಿತು ಸಾಮೂಹಿಕ ಚರ್ಚೆ ಮತ್ತು ಮಾರ್ಗದರ್ಶನವನ್ನು ಪ್ರತಿಯೊಂದು ಸಣ್ಣ ಪುಟ್ಟ ವಿವರಣೆಯೊಂದಿಗೆ ಅರ್ಥೈಸಿದರು.
ಐವತ್ತು ಜನರ ತಂಡದ ಎಲ್ಲ ಸದಸ್ಯರಿಗೆ ವಹಿಸಿದ ಶರಣ ಕುರಿತು ಸ್ಥಳದಲ್ಲೇ ಬರೆಯಲು ಅವಕಾಶ ನೀಡಲಾಯಿತು. ಯಾವುದೇ ಪವಾಡಗಳನ್ನು ಸೇರಿಸದೆ, ಕಾಲ್ಪನಿಕ ಸನ್ನಿವೇಶಗಳನ್ನು ಬರೆಯದೆ ನಿಜವಾದ ಅರ್ಥದಲ್ಲಿ ವಚನಗಳ ಸಾರಾಂಶ ಹಾಗೂ ಸದ್ಯದ ಸಮಯದಲ್ಲಿ ಅದರ ಪ್ರಸ್ತುತತೆ ಎಷ್ಟಿದೆ ಎನ್ನುವುದರ ಬಗೆಗೆ ಲೇಖನಗಳನ್ನು ಬರೆದುಕೊಟ್ಟು ಅದರ ಬಗೆಗೆ ಸಂವಾದ ನಡೆಸಲಾಯಿತು.
ಬಸವಕಲ್ಯಾಣದ ಎಲ್ಲ ಶರಣರ ಸ್ಮಾರಕಗಳನ್ನು ವೀಕ್ಷಿಸಿದ ನಂತರ ವಚನಗಳ ಶುದ್ದೀಕರಣ ಮತ್ತು ಪ್ರಕ್ಷಿಪ್ತ ನಿವಾರಣೆಯ ಅಗತ್ಯತೆ ಕುರಿತು ಡಾ ಪಟ್ಟಣ ಅವರು ಮನದಟ್ಟಾಗುವಂತೆ ವಿವರಿಸಿದರು.
ಅನುಭವ ಮಂಟಪದ ಗ್ಯಾಲರಿಯಲ್ಲಿ 7ಡಿ ತಂತ್ರಜ್ಞಾನನಕ್ಕೆ ಶರಣರ ಸಂವಾದ ಮತ್ತು ಸಂಭಾಷಣೆ ಮತ್ತು ವಚನಕಾರರ ಚರಿತ್ರೆಯ ಪ್ರಾತ್ಯಕ್ಷಿಕೆಯ ಹಾಗೂ ಯೋಜನೆಗಳ ಕಾರ್ಯಸೂಚಿ ರೂಪುರೇಷೆಗಳ ಕುರಿತು ಡಾ. ಬಾಬಾಸಾಹೇಬ ಗಡ್ಡೆ ತಿಳಿಸಿದರು.
ಎಲ್ಲ ಸದಸ್ಯರು ತಮ್ಮ ಎರಡು ದಿನಗಳ ಅನುಭವವನ್ನು ಹಂಚಿಕೊಂಡರು. ಶರಣೆ ಗೌರಮ್ಮ ನಾಶಿ, ಪ್ರೊ. ಶಾರದಮ್ಮ ಪಾಟೀಲ್, ಡಾ.ದಾನಮ್ಮ ಝಳಕಿ, ಡಾ. ವೀಣಾ ಎಲಿಗಾರ, ಡಾ. ಶರಣಮ್ಮ ಗೊರೆಬಾಳ, ಡಾ. ಸುಧಾ ಕೌಜಗೇರಿ, ಡಾ. ಕಸ್ತೂರಿ ದಳವಾಯಿ, ಡಾ. ಜಯಶ್ರೀ ಹಸಬಿ, ಡಾ. ಗೀತಾ ಡಿಗ್ಗೆ, ಡಾ. ಸಂಗಮೇಶ ಕಲಹಾಳ ಡಾ. ಜಯಶ್ರೀ ಪಟ್ಟಣ ಅವರು ಮಾತನಾಡಿದರು.