ನವದೆಹಲಿ: ರಾಜ್ಯ ಸರ್ಕಾರಕ್ಕೆ ಬಡವರ ಶಾಪ ತಟ್ಟದೇ ಬಿಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯ ಸರ್ಕಾರದಿಂದ ನಿರಂತರ ಬಡವರಿಗೆ ತೊಂದರೆ ಯಾಗುತ್ತಿದೆ ಎಂದಿದ್ದಾರೆ.
ಗ್ಯಾರಂಟಿ ಈಡೇರಿಕೆ ಆಗುತ್ತಿಲ್ಲ ಎಂದು ರಾಜ್ಯದ ಜನರಿಗೆ ಕ್ಷಮೆ ಕೇಳಲಿ ಎಂದವರು, ಶಾಸಕರಿಗೆ ಆಮಿಷ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಸರ್ಕಾರ ಉರುಳಿಸುವ ಆಸಕ್ತಿ ಇಲ್ಲ. ಅವರ ಶಾಸಕರೇ ದಂಗೆ ಏಳುವಂತಾಗಿದೆ. ಆಡಳಿತ ಪಕ್ಷದ ಶಾಸಕರೇ ಅಸಮಾಧಾನವಾಗಿದ್ದಾರೆ. ಅಲ್ಲಿ ಕುದುರೆ ವ್ಯಾಪಾರ ನಡೆಯುತ್ತದೆ. ಹೊರತು ನಮ್ಮಲ್ಲಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದು ವಿಷಯಕ್ಕೆ ಸಂಬಂಧಿಸಿದಂತೆ, ಬಡವರ ಮೇಲೆ ಗದಾಪ್ರಹಾರ ಮಾಡುವ ನಿರ್ಧಾರ ಅಕ್ಷಮ್ಯ. ಗ್ಯಾರಂಟಿ ಬಡವರು ಕೇಳಿರಲಿಲ್ಲ, ಅಧಿಕಾರದ ಹಪಾಹಪಿಯಿಂದ, ಒಂದು ಸುಳ್ಳು ನೂರು ಬಾರಿ ಹೇಳಿ, ಬಿಜೆಪಿ ಮೇಲೆ 40 ಪರ್ಸೇಂಟ್ ಸುಳ್ಳು ಆರೋಪ ಮಾಡಿದರು ಎಂದು ಕಿಡಿಕಾರಿದರು.
ಗ್ಯಾರಂಟಿ ಪೂರೈಸಲು ಆಗದೇ ಮುಖ್ಯಮಂತ್ರಿಗಳು ಪರದಾಡುತ್ತಿದ್ದಾರೆ. ಕೋಟ್ಯಂತರ ಹಣ ಉಳಿಸಲು ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ 10 – 20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ, ಅನರ್ಹರ ಕಾರ್ಡ್ ರದ್ದು ಮಾಡುವುದಕ್ಕೆ ಯಾರು ವಿರೋಧವೂ ಇಲ್ಲ. ಯಾವುದೇ ಆಧಾರವಿಲ್ಲದೇ ಏಕಾಏಕಿ ಬಿಪಿಎಲ್ ಕಾರ್ಡ್ ರದ್ದು ಕ್ರಮ ವಿರೋಧಿಸಿದರು. ಈ ಧೋರಣೆ ಸಿಎಂ ಬಡವರ ಪರ ಇದ್ದಾರಾ? ಎಂಬುದನ್ನು ತಿಳಿಸುತ್ತದೆ ಎಂದರು. ಬಡವರ ಮೇಲೆ ಬರೆ ಎಳೆಯುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಭಾಗ್ಯಲಕ್ಷ್ಮಿ, ಹಾಲಿನ ಪ್ರೋತ್ಸಾಹ, ಕಿಸಾನ್ ಸಮ್ಮಾನ ತಡೆದಿದ್ದಾರೆ. ತಮ್ಮ ಹುಳುಕು ಮುಚ್ಚಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ ಎಂದ ಬಿವೈವಿ, ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಸಿಎಂ ಮಾಡುತ್ತಿದ್ದಾರೆ ಎಂದಿದ್ದಾರೆ.
ರಾಜಕೀಯ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಸಚಿವರು, ಶಾಸಕರಿಗೆ ಅನಿಸುತ್ತಿದೆ ಎಂದರು.