ಮನೆಯ ಗೋಡೆ ಕುಸಿದು ಸಾವನ್ನಪ್ಪಿದ ಗುಂಜಲಮ್ಮ ಕುಟುಂಬಕ್ಕೆ ಶಾಸಕ ಶರಣಗೌಡ ಕಂದಕೂರ ಪರಿಹಾರ ಚೆಕ್ ವಿತರಣೆ ಮಾಡಿದರು.
ಗುರುಮಠಕಲ್: ಸರ್ಕಾರ ನೀಡಿರುವ ಪರಿಹಾರದ ಹಣವನ್ನು ಸಮರ್ಪಕ ಬಳಕೆ ಮಾಡಿಕೊಳ್ಳಲು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಚಿಂತಕುಂಟ ಗ್ರಾಮದಲ್ಲಿ ಇತ್ತೀಚೆಗೆ ಮನೆಯ ಗೋಡೆ ಕುಸಿದುಬಿದ್ದು ಮೃತಪಟ್ಟ ಗುಂಜಲಮ್ಮ ಕುಟುಂಬ ಸದಸ್ಯರಿಗೆ 5 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದರು. ಈಗಾಗಲೇ ಮೃತರ ಹೆಸರಿನಲ್ಲಿ ಮನೆ ಮಂಜೂರಾಗಿದ್ದು, ನಿರ್ಮಾಣ ಹಂತದಲ್ಲಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಲು ಸೂಚಿಸಿದರು.
ಕುಟುಂಬಕ್ಕೆ ಬೇಕಿರುವ ಸರ್ಕಾರದ ಸೌಕರ್ಯ ಒದಗಿಸಲು ತಹಸೀಲ್ದಾರರಿಗೆ ಸೂಚನೆ ನೀಡಿದರು.ಗ್ರಾಮೀಣ ಭಾಗದ ಜನರು ಬಹುತೇಕ ಕಾರ್ಮಿಕರಾಗಿದ್ದಾರೆ. ಇಂತಹ ದುರ್ಘಟನೆ ನಡೆದಿರುವುದು ಬೇಸರ ಮೂಡಿಸಿದೆ ಎಂದರು. ಘಟನೆಯಲ್ಲಿ ಒಬ್ಬ ವ್ಯಕ್ತಿಯೂ ಗಾಯಗೊಂಡಿದ್ದು, ಸೂಕ್ತ ಪರಿಹಾರ ಒದಗಿಸಲು ತಿಳಿಸಿದರು.
ಈ ವೇಳೆ ತಹಸೀಲ್ದಾರ ಕೆ.ನೀಲಪ್ರಭ, ಪ್ರಮುಖರಾದ ಶುಭಾಷ್ಚಂದ್ರ ಕಟಕಟೆ ಹೊನಗೇರಾ, ಶರಣು ಆವುಂಟಿ, ಈಶ್ವರ ರಾಠೋಡ, ಮಲ್ಲಿಕಾರ್ಜುನ ಅರುಣಿ, ನಾಗೇಶ ಗದ್ದುಗೆ ಸೇರಿದಂತೆ ಗ್ರಾಮಸ್ಥರು ಇದ್ದರು.