ಗುಳೆ ತಪ್ಪಿಸಲು ಸರ್ಕಾರ ರೈತರ ಬೆನ್ನಿಗೆ ನಿಲ್ಲುವಂತೆ ಉಮೇಶ್ ಕೆ. ಮುದ್ನಾಳ ಮನವಿ
ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತಿ ಬೆಳೆಗೆ ಬೆಂಬಲ ಬೆಲೆ ಘೋಷಿಸಲು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಮುದ್ನಾಳ ಗ್ರಾಮದ ಹೊರ ವಲಯದಲ್ಲಿರುವ ರೈತರ ಹತ್ತಿ ಬೆಳೆದ ಜಮೀನಿಗೆ ಭೇಟಿ ನೀಡಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ, ಯಾದಗಿರಿ ಜಿಲ್ಲೆಯಲ್ಲಿ ಸಕಾಲದಲ್ಲಿ ಉತ್ತಮ ಮಳೆಯಾಗಿದೆ.
ಈಗಾಗಲೇ ರಸಗೊಬ್ಬರ, ಬಿತ್ತನೆ ಬೀಜಕ್ಕಾಗಿ ಹಾಗೂ ಜಮೀನಿನಲ್ಲಿ ಬೆಳೆದ ಕಳೆ ತೆಗೆಯಲು ರೈತರು ಸಾಲ ಸೂಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ.
ರಸಗೊಬ್ಬರ ಮತ್ತು ಕೂಲಿ ಕಾರ್ಮಿಕರ ಬೆಲೆ ಕೂಡ ದುಬಾರಿ ಆಗಿರುವುದರಿಂದ ರೈತರು ಬೆಳೆದ ಹತ್ತಿ ಬೆಳೆಗೆ ಬೆಂಬಲ ಬೆಲೆ ಕೊಡದಿದ್ದರೆ ಬಡ ರೈತರಿಗೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಬರಲಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಬಹುಸಂಖ್ಯಾತ ರೈತರು ಹತ್ತಿ ಬೆಳೆದಿದ್ದು, ವಾಣಿಜ್ಯ ಬೆಳೆ ಹತ್ತಿ ನಿರಂತರ ಮಳೆಯಿಂದ ಇಳುವರಿ ಕುಂಠಿತ ಅಲ್ಲದೇ ಬೆಲೆ ಕುಸಿತದಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಲ ರೈತರು ಸೂಕ್ತ ಬೆಲೆ ಇಲ್ಲದ ಕಾರಣ ಹತ್ತಿ ಕೀಳದೆ ಕೊಳೆಯುತ್ತಿದೆ.
ಸರ್ಕಾರ ತುರ್ತತಾಗಿ ರೈತರಿಗೆ ಪ್ರತಿ ಕ್ವಿಂಟಾಲ್ ಗೆ ₹10 ಸಾವಿರ ಬೆಂಬಲ ಬೆಲೆಯಂತೆ ಖರೀದಿಸಿ ರೈತರ ಖಾತೆಗೆ ನೇರವಾಗಿ ಹಣ ಜಮಾವಾಗಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಶೀಘ್ರ ಕ್ರಮಕೈಗೊಳ್ಳದಿದ್ದರೇ ಗಡಿ ಭಾಗದ ಜನರು ಮಹಾನಗರಗಳಿಗೆ ಗುಳೆ ಹೋಗುವ ಅನಿವಾರ್ಯತೆ ಎದುರಾಗಲಿದೆ. ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.