ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಗಲಿಕೆಗೆ ಸರ್ಕಾರದ ಸಂತಾಪ ಸೂಚನೆ
ಬೆಂಗಳೂರು/ ಯಾದಗಿರಿ : ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್.ಎಂ.ಕೃಷ್ಣ ರವರು 2024ರ ಡಿಸೆಂಬರ್ 10ರ ಮಂಗಳವಾರ ರಂದು ಪೂರ್ವಾಹ್ನ 2.30 ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪ ಸೂಚಿಸಿದೆ ಎಂದು (ರಾಜ್ಯ ಶಿಷ್ಠಾಚಾರ) ಸಿಆಸುಇ ಸರ್ಕಾರದ ಉಪ ಕಾರ್ಯದರ್ಶಿ ಎಲಿಷ ಆಂಡ್ರೂಸ್ ಅವರು ತಿಳಿಸಿದ್ದಾರೆ.
ದಿವಂಗತರ ಅಂತ್ಯಕ್ರಿಯೆಯನ್ನು 2024ರ ಡಿಸೆಂಬರ್ 11ರ ಬುಧವಾರ ರಂದು ಹುಟ್ಟುರಾದ ಮಂಡ್ಯ ಜಿಲ್ಲೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರೆವೇರಿಸಲಾಗುವುದು ಮತ್ತು 2024ರ ಡಿಸೆಂಬರ್ 10 ರಿಂದ 12ರ ವರೆಗೆ (ಉಭಯ ದಿನಗಳು ಸೇರಿ) ಮೂರು ದಿನಗಳು ಶೋಕವನ್ನು ಆಚರಿಸಲಾ ಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳು ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಚಿಂಚನಸೂರ್ ಸಂತಾಪ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ಕರ್ನಾಟಕ ಕಂಡಂತ ಮೇರು ವ್ಯಕ್ತಿತ್ವದ ಅಪ್ರತಿಮಾ ರಾಜಕಾರಣಿ, ದೂರದೃಷ್ಟಿಯುಳ್ಳ ಮುತ್ಸದ್ಧಿ ನಾಯಕನನ್ನು ಕಳೆದು ಕೊಂಡಿರುವುದು ಅತೀವ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾಗದ ನಷ್ಟ.
ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ಅವರು ಕೈಗೊಂಡ ಜನಪರ ಕಾರ್ಯಗಳು ಅನನ್ಯ. ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು, ಪ್ರಮುಖವಾಗಿ ಬೆಂಗಳೂರು ನಗರವನ್ನು ವಿಶ್ವಕ್ಕೆ ಪರಿಚಯಿಸಿದರು. ಈ ಮೂಲಕ ರಾಜ್ಯದ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸಿದರು. ರಾಜ್ಯದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು.
ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನ ಮೇಲಿನ ವಿಶ್ವಾಸ ಮತ್ತು ಭರವಸೆಯಿಂದಾಗಿ ಅವರ ಸಂಪುಟದಲ್ಲಿ ಏಳು ಖಾತೆಗಳ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಏಳು ಖಾತೆಗಳನ್ನು ಯಶಸ್ವಿಗಾಗಿ ನಿಭಾಯಿಸಿದ್ದರಿಂದ ಸಪ್ತ ಖಾತೆಗಳ ಸರದಾರ ಎಂದು ನನ್ನನ್ನು ಬಣ್ಣಿಸಲಾಗುತ್ತಿತ್ತು. ಬೆಂಗಳೂರನ್ನು ಸಿಂಗಾಪೂರ ಮಾದರಿ ಅಭಿವೃದ್ಧಿಗೆ ಅವರು ಕನಸು ಕಂಡಿದ್ದರು. ಅವರ ರಾಜಕೀಯ ಜೀವನ ನನಗೆ ಅನುಕರಣೀಯ.
ಮೃತರ ಆತ್ಮಕ್ಕೆ ಚಿರ ಶಾಂತಿ ಕೊರುತ್ತೇನೆ. ಅವರ ಕುಟುಂಬ ವರ್ಗ, ಅಭಿಮಾನಿಗಳು, ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಬಾಬುರಾವ್ ಚಿಂಚನಸೂರ್ ಸಂತಾಪದಲ್ಲಿ ಹೇಳಿದ್ದಾರೆ.