ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ
ಗುರುಮಠಕಲ್: 2024-29ರ ಅವಧಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂತೋಷ ನೀರೆಟಿ 2ನೇ ಬಾರಿಗೆ ಗುರುಮಠಕಲ್ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತು. ಸಾಕಷ್ಟು ಕಸರತ್ತು ನಡೆದು ಇಂದು ಮತದಾನ ಮತ್ತು ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಹೊರಬಂದಿದೆ.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನೆಡೆದ ಚುನಾವಣೆ ಮತ್ತು ಮತ ಎಣಿಕೆ ಪ್ರಕ್ರಿಯೆ ನೆರವೇರಿತು. ಅಧ್ಯಕ್ಷ ಸ್ಥಾನಕ್ಕೆ ಸಂತೋಷ ನೀರೆಟಿ ಮತ್ತು ಆದೆಪ್ಪ ಬಾಗಿಲಿ ಅವರು ಕಣದಲ್ಲಿದ್ದರು. ಇಂದು ನಡೆದ ಚುನಾವಣೆಯಲ್ಲಿ ಸಂತೋಷ ನೀರೆಟಿ 16 ಮತ ಪಡೆದರೆ ಪ್ರತಿಸ್ಪರ್ದಿ 11 ಮತ ಪಡೆದು ಸೋಲೊಪ್ಪಿಕೊಂಡಿದ್ದಾರೆ.
ಇನ್ನು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಹರೀಶ ಕುಮಾರ ಮತ್ತು ವೆಂಕಟೇಶ ಕಾವಲಿ ಕಣದಲ್ಲಿದ್ದರು. ಚುನಾವಣೆ ಕಾವು ರಂಗೇರಿ, ತೀವ್ರ ಕುತೂಹಲ ಮೂಡಿಸಿದ್ದ ಸ್ಥಾನಕ್ಕೆ ಅಂತಿಮವಾಗಿ ಹರೀಶ ಕುಮಾರ 14 ಮತ ಪಡೆದು ಆಯ್ಕೆಯಾಗಿದ್ದು, ವೆಂಕಟೇಶ 13 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಚಂದ್ರಕಾಂತ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಣಮಂತರಾವ ಗೊಂಗಲೆ ಮಾಹಿತಿ ನೀಡಿದರು. ಸತ್ಯನಾರಾಯಣ, ಮೋನಪ್ಪ ಜಿ. ಸಹಾಯಕ ಚುನಾವಣಾಧಕಾರಿಗಳಾಗಿ ಸೇವೆ ಸಲ್ಲಿಸಿದರು.
ಸಂಭ್ರಮ ಆಚರಣೆ: ಸಂತೋಷ ನೀರೆಟಿ 2ನೇ ಬಾರಿ ಆಯ್ಕೆಯಾಗುತ್ತಿದ್ದಂತೆ ಸಂತೋಷ ನೀರೆಟಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಾರಾಯಣರೆಡ್ಡಿ ಪೊ.ಪಾಟೀಲ್, ವೆಂಕಟರಾಮುಲು ಹಂದರಕಿ, ವಿಜಯ ಕುಮಾರ ವಾರದ, ಸಿದ್ಧಲಿಂಗಪ್ಪ ನೆಲ್ಲೋಗಿ, ರವೀಂದ್ರ ಚೌಹನ್, ಮಾಣಿಕಪ್ಪ ಮುಖ್ಯಗುರು, ಶಶಿಕಾಂತ ಜನಾರ್ಧನ, ಆಂಜನೇಯಲು, ಅಶೋಕ ಕುಮಾರ ತೋರಣತಿಪ್ಪ, ಪ್ರವೀಣ ಕುಮಾರ, ಸುನೀಲ್ ಶುಕ್ಲಾ, ಭೀಮಪ್ಪ, ದೇವಿಂದ್ರಪ್ಪ, ಬಾಲಪ್ಪ, ಪ್ರಶಾಂತ ಕುಮಾರ ಸೇರಿದಂತೆ ನೌಕರರು ಇದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ ಸಂತೋಷ ನೀರೆಟಿ 16 ಮತ ಪಡೆದಿದ್ದು, ಇನ್ನೋರ್ವ ಅಭ್ಯರ್ಥಿ ಆದೆಪ್ಪ ಬಾಗಿಲಿ 11 ಮತ ಪಡೆದಿದ್ದಾರೆ. ರಾಜ್ಯ ಪರಿಷತ್ ಸ್ಥಾನದ ಸ್ಪರ್ದಿ ಹರೀಶ ಕುಮಾರ 14 ಮತ ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ ವೆಂಕಟೇಶ ಕಾವಲಿ 13 ಮತ ಪಡೆದರು. ಖಜಾಂಚಿ ಸ್ಥಾನಕ್ಕೆ ಚಂದ್ರಕಾಂತ ಅವಿರೋಧ ಆಯ್ಕೆಯಾಗಿದ್ದಾರೆ – ಹಣಮಂತರಾವ ಗೊಂಗಲೆ, ಚುನಾವಣಾಧಿಕಾರಿ.