ಗಡಿಯಲ್ಲಿ ಇನ್ನು ನಿಲ್ಲದ ಅಕ್ಕಿ ಸಾಗಾಟ | ಹೊರ ಜಿಲ್ಲೆಯ ವ್ಯಕ್ತಿಗಳಿಂದ ಗುರುಮಠಕಲ್ ಮಾರ್ಗವಾಗಿ ರಾಜಾರೋಷವಾಗಿ ಸಾಗಾಣೆ | ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಗುರುಮಠಕಲ್: ಶುಕ್ತರವಾರ ತಡರಾತ್ರಿ ತಾಲ್ಲೂಕಿನ ಚಿನ್ನಕಾರ-ಧರ್ಮಪುರ ಮಾರ್ಗ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಕ್ಕಿ ಅನ್ನಭಾಗ್ಯ ಅಕ್ಕಿ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ನಾಗೇಶ ಗದ್ದಿಗಿ ಆರೋಪಿಸಿದ್ದು, ತನಿಖೆ ನಡೆಸಿ ಸತ್ಯಾಂಶ ಹೊರತರುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಗುರುಮಠಕಲ್ ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದು ರಾಯಚೂರು ಜಿಲ್ಲೆಯಲ್ಲಿ ವಿತರಿಸಿದ ಅನ್ನಭಾಗ್ಯ ಯೋಜನೆ ಅಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮವಾಗಿ ಸಾಗಿಸಲು ಯತ್ನಿಸಿದ ಪ್ರಕರಣವಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

29-11-2025ರಂದು ಬಳ್ಳಾರಿ ಜಿಲ್ಲೆಯ ಶ್ರೀ ಗಣೇಶ್ ಆಗ್ರೋ ಫುಡ್ಸ್ ಹೆಸರಿನ ಮೇಲೆ ಪರವಾನಗಿ (ಪರ್ಮಿಟ್) ಪಡೆದುಕೊಂಡು ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿ (ನಂ. ಎಪಿ 26 ವೈವೈ 3195) ಯಾಲಾಲ್ ರಸ್ತೆ, ಜಿಕ್ಕೇಪಲ್ಲಿ (ವಿಕಾರಾಬಾದ್ ಜಿಲ್ಲಾ, ತೆಲಂಗಾಣ ರಾಜ್ಯ)ಯ ಕಡೆಗೆ ತೆರಳುತ್ತಿದ್ದ ವೇಳೆ ಚಿನ್ನಾಕಾರ–ಧರ್ಮಪೂರ ಮುಖ್ಯರಸ್ತೆಯಲ್ಲಿ ಲಾರಿ ತಾಂತ್ರಿಕ ದೋಷ ಕಾಣಿಸಿ ನಿಂತಿತ್ತು.ಲಾರಿ ಸಾಮರ್ಥ್ಯ ಮೀರಿದ ಚೀಲಗಳನ್ನು ತುಂಬಲಾಗಿದ್ದ ಕಾರಣ, ಕೆಲವು ಅಕ್ಕಿ ಚೀಲಗಳು ನಡುರಸ್ತೆಗೇ ಬಿದ್ದಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸಂಘಟನೆಯವರು ಸ್ಥಳಕ್ಕೆ ಧಾವಿಸಿ ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಇದ್ದ ಪೋಲಿಸರು ಸಂಚಾರ ಸುಗಮಕ್ಕೆ ಲಾರಿಯನ್ನು ತೆರವುಗೊಳಿಸುತ್ತಿದ್ದರು.

ಅಧಿಕಾರಿಗಳ ಸಮ್ಮುಖದಲ್ಲಿ ಆಹಾರ ನಿರೀಕ್ಷಕರು ಅಕ್ಕಿ ಪರಿಶೀಲನೆ ನಡೆಸಿ, ಅಲ್ಲಿನ ಡ್ರೈವರ್ ಗೆ ವಿಚಾರಿಸಿದಾಗ ಇದು ರಾಯಚೂರು ಜಿಲ್ಲೆಯಲ್ಲಿ ತುಂಬಿಕೊಂಡು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಪರವಾನಿಗೆ ಪಡೆದಿರುವುದು ಬಳ್ಳಾರಿಯಿಂದ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದಲ್ಲದೇ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ನಂತರ ಇದು “ಅನ್ನಭಾಗ್ಯ ಅಕ್ಕಿ ಅಲ್ಲ” ಹೆಚ್ಚಿನ ವಿಚಾರಣೆಗಾಗಿ ಇದನ್ನು ತಪಾಸಣೆಗೊಳಪಡಿಸಬೇಕು ಎಂದು ಹೇಳಿದ್ದಾರೆ. ಆದರೆ ಚೀಲಗಳಲ್ಲಿ ಪತ್ತೆಯಾದ ಪ್ರೋಟೀನ್‌ಯುಕ್ತ ಅಕ್ಕಿ ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿಯ ಲಕ್ಷಣಗಳಿಗೆ ಹೊಂದಿಕೆಯಾಗುತ್ತಿರುವುದರಿಂದ ನಮಗೆ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ, ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ರಾಜ್ಯದಲ್ಲಿ ನಡೆಯದಂತೆ ಕಠಿಣ ನಿಗಾವಹಿಸಬೇಕೆಂದು ಆಗ್ರಹಿಸಿದರು. ಠಾಣೆಯ ಎಸ್. ಹೆಚ್, ಓ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಉಪಾಧ್ಯಕ್ಷರಾದ ಕಾಶಪ್ಪ ದೊರೆ, ರಾಮುಲು ಕೊಡುಗಂಟಿ, ಬಿ.ಎಸ್. ತಲಾರಿ, ಎಸ್.ಪಿ ಮಹೇಶ್, ಉದಯಕುಮಾರ, ನಿಖೀಲ್ ಕುಮಾರ,ಆಯಾಜ್ ಅಲಿ ಸಿದ್ದು ಸೇರಿದಂತೆ ಇನ್ನಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!