ಇಂದಿರಾನಗರಕ್ಕೆ ರಾಜ್ಯ ಪ.ಜಾ. ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಭೇಟಿ | ಮೃತ ಯುವತಿಯರ ಕುಟುಂಬಕ್ಕೆ ಸಾಂತ್ವಾನ | ವಸತಿ ಸಮುಚ್ಚಯ ಪರಿಶೀಲನೆ |ಶಾಲೆಗೆ ಭೇಟಿ | ಅಧಿಕಾರಿಗಳ ತರಾಟೆ

ಗುರುಮಠಕಲ್: ರಾಜ್ಯ ಪ.ಜಾ.ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಅವರು ಭಾನುವಾರ ಇಂದಿರಾನಗರದ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವ ಯುವತಿಯರ ಕುಟುಂಬಕ್ಕೆ ಭೇಟಿಯಾಗಿ ಸಾಂತ್ವಾನ ಹೇಳಿದರು.

ಕುಟುಂಬದವರ ರೋಧನ ಕಂಡು ಅಪ್ಪಿಕೊಂಡು ಧೈರ್ಯವಾಗಿ ರಲು ಹೇಳಿದರು. ಯುವತಿಯರ ತಾಯಿಯರೊಂದಿಗೆ ಮಾತನಾಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದರು.

ಬಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ ಮಾತನಾಡಿ, ಚಿಂದಿ ಆಯ್ದು ಜೀವನ ನಡೆಸುವ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾವಿಗೆ ನ್ಯಾಯ ದೊರಕಿಸಲು ಕಾಳಜಿವಹಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣ ನಡೆದು 25 ದಿನಗಳು ಕಳೆದರು ಘಟನೆಗೆ ಸಂಬಂಧಿಸಿ ದಂತೆ ಯಾರನ್ನು ಬಂಧಿಸಿಲ್ಲ. ಅಟ್ರಾಸಿಟಿ ಪ್ರಕರಣದ ಒಂದು ಬಂಧನವಾಗಿದ್ದು, ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನೇರವಾಗಿ ಅನುಮಾನ ಇರುವವರ ಬಗ್ಗೆ ತಿಳಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಆಳುವವರಿಗೆ ಕಳಂಕ ಬರುತ್ತದೆ ಎಂದು ಇದನ್ನು ಬಯಲು ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಾಯಚೂರು ಜಿಲ್ಲೆಯ 2, ಸಿರುಗುಪ್ಪದ ಇದೇ ರೀತಿಯ ಘಟನೆಯಲ್ಲಿ ನ್ಯಾಯ ಸಿಕ್ಕಿಲ್ಲ. ಸಿಒಡಿ ತನಿಖೆಯಾಗಬೇಕು, 25 ಲಕ್ಷ ಪರಿಹಾರ, ಮನೆ ನಿರ್ಮಾಣ ಮಾಡಲು ಒತ್ತಾಯಿಸಿ, ಸೂಕ್ತ ನ್ಯಾಯ ಒದಗಿಸಲು ಮನವಿ ಮಾಡಿದರು.

ಖಾಲಿ ಹಾಳೆಯ ಮೇಲೆ ತಾಯಂದಿರ ಸಹಿ ಪಡೆದು ಪ್ರಕರಣ ತಿರಿಚುವ ಪ್ರಯತ್ನವಾಗಿದೆ ಎಂದು ಸಂಘಟನೆಗಳ ಪ್ರಮುಖರು ಅಧ್ಯಕ್ಷರ ಗಮನಕ್ಕೆ ತಂದರು.

ಈ ವೇಳೆ ಸಂಘಟನೆಗಳು ಮನವಿ ಆಲಿಸಿದ ಅಧ್ಯಕ್ಷರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಎಫ್ ಎಸ್ ಎಲ್ ವರದಿ ಬರಲಿ, ಎಲ್ಲಾ ಹೆಣ್ಣು ಮಕ್ಕಳು ಅಷ್ಟೇ. ಸಾಕಷ್ಟು ನೋವು ತಂದಿದೆ.

ಕಾನೂನು ಎಲ್ಲರಿಗೂ ಒಂದೇ. ಜಾತಿ, ಧರ್ಮಕ್ಕೆ ಬೇರೆ ಕಾನೂನು ಇಲ್ಲ. ಸಮುದಾಯ, ಸರ್ಕಾರದ ಪ್ರತಿನಿಧಿಯಾಗಿ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಘಟನೆ ನಡೆದ ಸ್ಥಳ ನೀಲಹಳ್ಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.

ಎಫ್ಐಆರ್ ಬಗ್ಗೆ ಕೆಲವು ಅಸಮಾಧಾನ ಇದನ್ನು ಸರಿಪಡಿಸಲು ಒತ್ತಾಯಯಿದೆ. ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ತ್ವರಿತವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಭರವಸೆ ಇಡಿ ಎಂದರು.

ಈ ಜನರಿಗೆ ಕಾನೂನು ಎಂದರೆ ಭಯ, ಅನಕ್ಷರತೆ ಯಿಂದ ಯಾವುದು ತಿಳಿಯಲ್ಲ. ಈ ಪ್ರಕರಣ ಪ್ರಾಮಾಣಿಕ ತನಿಖೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ವಾಸಿಸುವ ಮನೆಗಳಿಗೆ ಭೇಟಿ: ಬುಡ್ಗ ಜಂಗಮ ಸಮುದಾಯದವರು ವಾಸಿಸುವ ಮನೆಗಳಿಗೆ ತೆರಳಿ ಅಧ್ಯಕ್ಷರು ವ್ಯವಸ್ಥೆ ಪರಿಶೀಲನೆ ಮಾಡಿದರು. ಸುಮಾರು ವರ್ಷಗಳ ಹಳೆಯ ಮನೆಗಳಿದ್ದು ಜೀವನ ಪ್ರಾಣಿಗಳಿಗಿಂತ ಕಡೆಯಾಗಿದೆ ಎಂದು ಜನ ಅಳಲು ತೋಡಿಕೊಂಡರು.

ಪ್ರಾಥಮಿಕ ಶಾಲೆಗೆ ಭೇಟಿ : ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ, ಕೊಠಡಿಗಳಿದ್ದರೂ ಏಕೆ ಬಳಕೆ ಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಪುರಸಭೆಯ ಅಧಿಕಾರಿಗಳು ಸ್ಪಂದನೆ ಮಾಡದ್ದಕ್ಕೆ ತರಾಟೆಗೆ ತೆಗೆದುಕೊಂಡು ವ್ಯವಸ್ಥೆ ಮಾಡದಿದ್ದರೆ ಸರ್ಕಾರಕ್ಕೆ ವರದಿ ಮಾಡುವುದಾಗಿ ಎಚ್ಚರಿಸಿದರು.

ಈ ವೇಳೆ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ಡಿವೈಎಸ್ಪಿ ಅರುಣಕುಮಾರ, ತಹಸೀಲ್ದಾರ್ ಶಾಂತಗೌಡ ಬಿರಾದಾರ, ಮುಖ್ಯಾಧಿಕಾರಿ ಭಾರತಿ ದಂಡೋತಿ ಸೇರಿದಂತೆ ಡಿಎಸ್ಎಸ್ ತಾಲೂಕು ಅಧ್ಯಕ್ಷ ಅಶೋಕ ಶನಿವಾರಂ, ಶಿವರಾಜ ರುದ್ರಾಕ್ಷಿ, ವೈ.ಮಾರುತಿ, ಶಂಕರ ಶಾಸ್ತ್ರಿ, ಪಂಡಿತ ಸಿರವಾಟಿ, ಮಹಾದೇವ, ಯಮುನಪ್ಪ, ಶ್ರೀನಿವಾಸ, ದೊಡ್ಡ ಜಂಬಣ್ಣ, ಬಸವರಾಜ ಇನ್ನಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!